ಸಾರಾಂಶ
ಮಳವಳ್ಳಿ: ಕೋಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ವಕೀಲರು ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಆವರಣದಿಂದ ವಕೀಲರ ಸಂಘದ ನೇತೃತ್ವದಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ಬಳಿ ತೆರಳಿದ ವಕೀಲರು, ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ವೈದ್ಯಕೀಯ ಕಾಲೇಜಿನಲ್ಲೇ ತರಬೇತಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ದುಷ್ಕರ್ಮಿಗಳು ಕೊಲೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ. ಶಿಕ್ಷಣ ಸಂಸ್ಥೆಗಳಲ್ಲೇ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಮಹಿಳೆಯರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು. ಕಾಲೇಜಿನ ಮುಖ್ಯಸ್ಥರನ್ನು ಸೇವೆಯಿಂದ ವಜಾಗೊಳಿಸಿ ಅವರನ್ನು ಕೂಡ ಬಂಧಿಸುವುದರ ಜೊತೆಗೆ ಕೃತ್ಯವೆಸಗಿದ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಸಿ.ಎಂ.ನಟೇಶ್, ವಕೀಲರಾದ ಮಲ್ಲಪ್ಪ, ಹರ್ಷವರ್ದನ, ರಾಜು, ಜಗದೀಶ್, ಮುತ್ತುರಾಜ್, ಹೇಮಂತ್, ರಾಣಿ, ನಾಗರತ್ನ, ಮೈತ್ರಿ, ರೂಪ ಮತ್ತಿತರರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))