ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಪರಾಧಿಗಳಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದೆ.ರಾಯಬಾಗ ನಿವಾಸಿ ಅರ್ಜುನಸಾಹೇಬ ರಸೂಲ್ ನಾಲಬಂದ (19) ಮತ್ತು ಅಶೀಶ್ ಧರ್ಮರಾಜ ಕಾಂಬಳೆ ( 25) ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾದವರು. ಜೈಲು ಶಿಕ್ಷೆ ಜೊತೆಗೆ ತಲಾ ₹ 10 ಸಾವಿರ ದಂಡ ವಿಧಿಸಲಾಗಿದೆ.
29-12-2016ರಂದು ಆರೋಪಿ ಆಶೀಶ ಕಾಂಬಳೆ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಬಾಲಕಿ ಶಾಲೆಯಿಂದ ಮನೆಗೆ ಬರುವಾಗ ರಾತ್ರಿ ಹೊರಗಡೆ ಬಾ ಮಾತನಾಡುವುದಿದೆ ಎಂಬು ಪುಸಲಾಯಿಸಿ, ಬೈಕ್ ಮೇಲೆ ಮಹರಾರಾಷ್ಟ್ರದ ಗಣೇಶವಾಡಿಗೆ ಕರೆದುಕೊಂಡು ಹೋಗಿ ಬಾಲಕಿಯನ್ನು ಪರಿಚಯಸ್ಥರ ಇಬ್ಬರ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಬಾಲಕಿಯನ್ನು ಗ್ರಾಮಕ್ಕೆ ತಂದು ಬಿಟ್ಟಿದ್ದ. ಈ ಕುರಿತು ಬಾಲಕಿಯ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.29-5-2018 ರಂದು ಆರೋಪಿ ಅರ್ಜುನಸಾಹೇಬ ನಾಲಬಂದ ನಿಮ್ಮ ಮನೆ ಕಡೆಗೆ ಹೋಗುತ್ತಿದ್ದು,ನಿನ್ನನ್ನು ಬಿಟ್ಟು ಹೋಗುವುದಾಗಿ ಬಾಲಕಿಗೆ ಹೇಳಿದ್ದಾನೆ.ಬಾಲಕಿ ಇದಕ್ಕೆ ನಿರಾಕರಿಸಿದರೂ ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಹತ್ತಿಸಿಕೊಂಡು ದಿಗ್ಗೇವಾಡಿ ಕ್ರಾಸ್ ದಾಟಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ವಿಷಯ ಯಾರಿಗೂ ಹೇಳದಂತೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದ. ಈ ಎರಡು ಪ್ರಕರಣ ರಾಯಬಾಗ ಠಾಣೆಯಲ್ಲಿ ದಾಖಲಾಗಿದ್ದವು. ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಆರೋಪಿಗಳಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡ ವಿಧಿಸಿದ್ದಲ್ಲದೆ, ನೊಂದ ಬಾಲಕಿಯರಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ತಲಾ ₹1 ಲಕ್ಷ ಪರಿಹಾರ ಪಡೆಯುವಂತೆ ಆದೇಶ ನೀಡಿದ್ದಾರೆ. ಉಭಯ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.