ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ಸಾವು

| Published : Jun 29 2024, 12:35 AM IST

ಸಾರಾಂಶ

ಕೆಲ ತಿಂಗಳ ಕಾಲ ನಿರಂತರ ಅತ್ಯಾಚಾರಕ್ಕೊಳಗಾಗಿ, 8 ತಿಂಗಳ ಗರ್ಭಿಣಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ 13 ವರ್ಷದ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಕಲಬುರಗಿ ನಗರದಲ್ಲಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೆಲ ತಿಂಗಳ ಕಾಲ ನಿರಂತರ ಅತ್ಯಾಚಾರಕ್ಕೊಳಗಾಗಿ, 8 ತಿಂಗಳ ಗರ್ಭಿಣಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ 13 ವರ್ಷದ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಕಲಬುರಗಿ ನಗರದಲ್ಲಿ ಸಂಭವಿಸಿದೆ.

ಈ ಘಟನೆಯನ್ನು ಖಂಡಿಸಿ ಹಾಗೂ ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ತಿಂಗಳು ಗಟ್ಟಲೆ ಅತ್ಯಾಚಾರ ಮಾಡಿರುವ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಸಾವನ್ನಪ್ಪಿರುವ ಬಾಲಕಿಯ ಬಂಧುಗಳು, ಬಡಾವಣೆಯ ನಿವಾಸಿಗಳು ಹಾಗೂ ದಲಿತ ಸಂಘಟನೆಯ ಮುಖಂಡರು ಕಲಬುರಗಿಯಲ್ಲಿರುವ ಕೆಬಿಎನ್‌ ಆಸ್ಪತ್ರೆ ಮುಂದಿನ ಮುಖ್ಯ ರಸ್ತೆಯಲ್ಲಿ ಕೆಲಕಾಲ ಧರಣಿ ನಡೆಸಿದಾಗ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.

ಅತ್ಯಾಚಾರಕ್ಕೊಳಗಾದ ಬಾಲಕಿ ಹೊಟ್ಟೆ ನೋವೆಂದು ಹೇಳಿದಾಗ ಆಕೆಯನ್ನು ಕಳೆದ ಗುರುವಾರವಷ್ಟೇ ಅವರ ತಾಯಿ ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕಿಗೆ ತಂದೆ ಇಲ್ಲ. ಕೆಬಿಎನ್‌ ವೈದ್ಯರು ಅವಳನ್ನು ಪಾಸಣೆಗೊಳಪಡಿಸಿ ಆಕೆ ಗರ್ಭಿಣಿ ಎನ್ನೋದನ್ನ ಖಚಿತಪಡಿಸಿದ್ದರು, ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದಳು.

ಮಿಲ್ಲತ್‌ ನಗರದ ನಿವಾಸಿ, ವಿವಾಹಿತ ಮಿರ್ಝಾ ಸರ್ಫರಾಜ್‌ ತನ್ನ ಮಗಳನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಾನೆಂದು ಸಾವನ್ನಪ್ಪಿರುವ ಬಾಲಕಿಯ ತಾಯಿ ಆರೋಪಿಸಿದ್ದಾರೆ.

ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಬಾಲಕಿಯ ತಾಯಿ ನೀಡಿರುವ ದೂರಿನ ಮೇರೆಗೆ ಸಬ್‌ ಅರ್ಬನ್‌ ಠಾಣೆಯಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿ 8 ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಮಿರ್ಜಾ ಸರ್ಫರಾಜ್‌ ತನ್ನ ಮಗಳಿಗೆ ಚುಡಾಯಿಸುತ್ತಿದ್ದ. ಈತ ವಿವಾಹಿತನಾಗಿದ್ದರೂ ಈ ಕೆಲಸಕ್ಕೆ ಮುಂದಾಗಿರೋದು ಕಂಡು ಹೀಗೆಲ್ಲ ಮಾಡಬಾರದೆಂದು ತಿಳಿ ಹೇಳಿ ತಾಕೀತು ಮಾಡಿದರೂ ಆತ ಅದನ್ನೇ ಮುಂದುವರಿಸಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಮಗಳಿಗೆ ಮದುವೆಯಾಗೋದಾಗಿ ನಂಬಿಸಿ, ಪುಸಲಾಯಿಸಿ ಅತ್ಯಾಚಾರ ಮಾಡಿದ್ದಾನೆಂದು ದೂರಿನಲ್ಲಿ ಸಾವನ್ನಪ್ಪಿರುವ ಬಾಲಕಿಯ ತಾಯಿ ದೂರಿನಲ್ಲಿ ಹೇಳಿದ್ದಾರೆ.

ಘಟನೆಯನ್ನು ಖಂಡಿಸಿ ದಲಿತ ಸೇನೆಯ ಮುಖಂಡರಾದ ಹಣಮಂತ ಯಳಸಂಗಿ , ಸೇನೆಯ ಕಾರ್ಯಕರ್ತರು ಹಾಗೂ ಮೃತ ಬಾಲಕಿಯ ಬಂಧಗಳು ಸೇರಿಕೊಂಡು ಕೆಬಿಎನ್‌ ಆಸ್ಪತ್ರೆಯ ಮುಂದಿನ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಮುಖ್ಯರಸ್ತೆಯಲ್ಲಿನ ಸಂಚಾರ ಸ್ಥಗಿತಗೊಂಡಿತ್ತು.

ಡಿಸಿಪಿ ಕನ್ನಿಕಾ ಸಿಕ್ರಿವಾಲ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಆದಾಗ್ಯೂ ಕೆಲಕಾಲ ಆಸ್ಪತ್ರೆ ಮುಂದಿನ ರಸ್ತೆಯಲ್ಲಿ ಉದ್ವಿಗ್ನ ಪರಿಸ್ತಿತಿ ತಲೆದೋರಿತ್ತು. ಹೆಚ್ಚಿನ ಪೊಲೀಸ್‌ ಬಲ ಬಂದು ಅಲ್ಲಿನ ಪರಿಸ್ಥಿತಿ ತಿಳಿಗೊಳಿಸಲಾಯ್ತು.