ತಾಯಿಯ ಆರೈಕೆಗಾಗಿ ರೇಪಿಸ್ಟ್‌ ಪೊಲೀಸ್‌ ಶಿಕ್ಷೆ ಕಡಿತ

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಧ್ಯರಾತ್ರಿ ರಸ್ತೆ ಬದಿ ಕಾಣಿಸಿದ್ದ ಮಹಿಳೆಯನ್ನು ಕರೆದೊಯ್ದು ಜೀಪ್‌ನಲ್ಲೇ ಅತ್ಯಾಚಾರ ನಡೆಸಿದ್ದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗೆ 62 ವರ್ಷ ತುಂಬಿರುವ ಜೊತೆಗೆ ವಯೋವೃದ್ಧ ತಾಯಿ, ಪತ್ನಿಯ ಆರೈಕೆ ಮತ್ತು ಮಕ್ಕಳ ಮದುವೆ ಮಾಡಬೇಕಾದ ಕಾರಣ ಪರಿಗಣಿಸಿರುವ ಹೈಕೋರ್ಟ್‌, ಶಿಕ್ಷಾವಧಿಯನ್ನು10 ವರ್ಷಕ್ಕೆ ಇಳಿಸಿದೆ.

ತನಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಬ್‌ ಇನ್ಸ್‌ಪೆಕ್ಟರ್‌ ಉಮೇಶ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್‌, ಶಿಕ್ಷಾವಧಿಯನ್ನು ಇಳಿಸಿದೆ. ಇದರಿಂದ ಈಗಾಗಲೇ ಒಂಬತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಉಮೇಶ್‌, ಇನ್ನೊಂದು ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಅಮಿತ್‌ ರಾಣಾ ಮತ್ತು ಹರಿಯಾಣ ಸರ್ಕಾರದ ನಡುವಿನ ಪ್ರಕರಣದಲ್ಲಿ ಕಾನೂನಿನಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲ್ಪಟ್ಟ ಸಂದರ್ಭದಲ್ಲಿ ಶಿಕ್ಷೆ ಪ್ರಮಾಣ ಇಳಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದುಕೊಂಡು, ತನ್ನ ಸುಪರ್ದಿಯಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಅಪರಾಧಕ್ಕೆ ಉಮೇಶ್‌ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 376(2)(ಎ)(3) ಅಡಿ 20 ವರ್ಷ ಜೈಲು ಮತ್ತು ಐಪಿಸಿ ಸೆಕ್ಷನ್ 376(2)(ಎಲ್‌) ಅಡಿ ಮಾನಸಿಕ ಮತ್ತು ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿರುವ ಮಹಿಳೆ ಮೇಲಿನ ಅತ್ಯಾಚಾರ ಅಪರಾಧಕ್ಕೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಅಧೀನ ನ್ಯಾಯಾಲಯ ಆದೇಶಿಸಿದೆ. ಎರಡೂ ಸೆಕ್ಷನ್‌ಗಳ ಅಡಿಯಲ್ಲಿ ಕನಿಷ್ಠ ಏಳು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಈ ಸೆಕ್ಷನ್‌ ಅಡಿಯಲ್ಲಿ ತಲಾ 20 ಜೈಲು ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯ ಸಮಂಜಸ ಕಾರಣ ನೀಡಿಲ್ಲ ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಉಮೇಶ್‌ಗೆ 62 ವರ್ಷವಾಗಿದ್ದು, ಈಗಾಗಲೇ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಸದ್ಯ ವಯೋವೃದ್ಧ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳ ಆರೈಕೆ ಹಾಗೂ ಮಕ್ಕಳ ಮದುವೆ ಮಾಡಬೇಕಿದೆ. ಇದರಿಂದ ಶಿಕ್ಷೆ ಪ್ರಮಾಣ 10 ವರ್ಷಕ್ಕೆ ಇಳಿಸುವಂತೆ ಆರೋಪಿ ಪರ ವಕೀಲರು ಕೋರಿದ್ದಾರೆ. ಈ ಮನವಿ ಮತ್ತು ಸುಪ್ರೀಂ ಕೋರ್ಟ್ ಆದೇಶ ಪರಿಗಣಿಸಿ, ಉಮೇಶ್‌ ಅನ್ನು ಅಪರಾಧಿಯಾಗಿ ತೀರ್ಮಾನಿಸಿದರೂ ಶಿಕ್ಷಾವಧಿ ಮಾರ್ಪಡಿಸಲಾಗುತ್ತಿದೆ. ಅದರಂತೆ ಐಪಿಸಿ ಸೆಕ್ಷನ್‌ 376(2)(ಎ)(3) ಅಡಿಯಲ್ಲಿ ಏಳು ವರ್ಷ ಜೈಲು, 50 ಸಾವಿರ ರು. ಮತ್ತು ಐಪಿಸಿ ಸೆಕ್ಷನ್‌ 376(2)(ಎಲ್‌) ಅಡಿಯಲ್ಲಿ ಹತ್ತು ವರ್ಷ ಜೈಲು ಮತ್ತು 50 ಸಾವಿರ ರು. ದಂಡ ವಿಧಿಸಲಾಗಿದೆ. ಅಪರಾಧಿ ದಂಡ ಮೊತ್ತ ಠೇವಣಿಯಿಟ್ಟ ನಂತರ ಶಿಕ್ಷಾವಧಿ ಕಡಿತದ ಲಾಭ ಪಡೆಯಲು ಅರ್ಹರಾಗುತ್ತಾನೆ. ದಂಡ ಮೊತ್ತವನ್ನು ಸಂತ್ರಸ್ತೆಗೆ ಅಧೀನ ನ್ಯಾಯಾಲಯ ವಿತರಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಕರಣದ ಹಿನ್ನೆಲೆ:

2017ರ ಜ.14 ಮತ್ತು 15ರಂದು ಮಧ್ಯರಾತ್ರಿ 2.15ರ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಉಮೇಶ್‌, ಅಂತರಸನಹಳ್ಳಿ ಬೈಪಾಸ್‌ ಬ್ರಿಡ್ಜ್‌ ಬಳಿ ಕಾಣಿಸಿದ್ದ ಮಹಿಳೆಯನ್ನು ಕರೆದೊಯ್ದು ನೃಪತುಂಗ ಬಸ್‌ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಜೀಪ್‌ನಲ್ಲೇ ಅತ್ಯಾಚಾರ ನಡೆಸಿದ್ದರು. ತುಮಕೂರು ಮಹಿಳಾ ಠಾಣಾ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತುಮಕೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಉಮೇಶ್‌ ಅನ್ನು ಅಪರಾಧಿಯಾಗಿ ತೀರ್ಮಾನಿಸಿತು. ಐಪಿಸಿ ಸೆಕ್ಷನ್‌ 376(2)(a)(3) ಮತ್ತು 376(2) (ಎಲ್‌) ಅಡಿಯಲ್ಲಿ ತಲಾ 20 ವರ್ಷ ಜೈಲು ಮತ್ತು 50 ಸಾವಿರ ರು. ದಂಡ ವಿಧಿಸಿ 2022ರ ಜನವರಿಯಲ್ಲಿ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಉಮೇಶ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು. ಆತನ ಪರ ವಕೀಲರು, ಅಧೀನ ನ್ಯಾಯಾಲಯವು ಊಹೆ ಆಧಾರದಲ್ಲಿ ಉಮೇಶ್‌ ಅವರನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದೆ ಎಂದು ವಾದಿಸಿದ್ದರು. ನಂತರ ಅಮಿತ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಅನುಸಾರ ಶಿಕ್ಷಾವಧಿ ಕಡಿತಕ್ಕೆ ಕೋರಿದ್ದರು.