ಕಡೂರುಕಾಲಗರ್ಭದಲ್ಲಿ ಮರೆಯಾಗಿದ್ದ ಅಮೂಲ್ಯ ಜೈನ ನಿಷಧಿ ಶಾಸನ ತಾಲೂಕಿನ ಯಳಂಬಳಸೆ ಗ್ರಾಮದಲ್ಲಿ ಮತ್ತೆ ಪತ್ತೆ ಯಾಗಿರುವುದು ಕಡೂರು ಭಾಗದಲ್ಲಿ ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆ ದೊರೆತಂತಾಗಿದೆ.
- 10ನೇ, 11ನೇ ಶತಮಾನದ ಇತಿಹಾಸ ಅನಾವರಣ
ಕನ್ನಡಪ್ರಭ ವಾರ್ತೆ, ಕಡೂರುಕಾಲಗರ್ಭದಲ್ಲಿ ಮರೆಯಾಗಿದ್ದ ಅಮೂಲ್ಯ ಜೈನ ನಿಷಧಿ ಶಾಸನ ತಾಲೂಕಿನ ಯಳಂಬಳಸೆ ಗ್ರಾಮದಲ್ಲಿ ಮತ್ತೆ ಪತ್ತೆ ಯಾಗಿರುವುದು ಕಡೂರು ಭಾಗದಲ್ಲಿ ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆ ದೊರೆತಂತಾಗಿದೆ.ವಿಶೇಷವೆಂದರೆ ಈ ನಿಷಧಿ ಶಾಸನ 4 ಮುಖಗಳನ್ನು ಹೊಂದಿದ್ದು, ಎರಡರಲ್ಲಿ ಕ್ರಿ.ಶ. 969ರ ಶಾಸನವಿದ್ದರೆ, ಉಳಿದ ಎರಡರಲ್ಲಿ ಕ್ರಿ.ಶ. 1079ರ ಶಾಸನಗಳಿವೆ. ಜಿನಬಿಂಬ ಸಹಿತವಾದ ಈ ಶಾಸನ ಅಂದಿನ ಜೈನ ಧರ್ಮದ ಬೆಳವಣಿಗೆ, ಮುನಿಗಳ ಪರಂಪರೆ ಹಾಗೂ ಧಾರ್ಮಿಕ ಚಟುವಟಿಕೆಗಳ ಕುರಿತು ಮಹತ್ವದ ಮಾಹಿತಿ ಒದಗಿಸುತ್ತದೆ.ಯಳಂಬಳಸೆ ಗ್ರಾಮ 12ನೇ ಶತಮಾನದಲ್ಲಿ ಬ್ರಾಹ್ಮಣ ಅಗ್ರಹಾರ ಎಂಬುದು ಐತಿಹಾಸಿಕ ಶಾಸನಗಳಿಂದ ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಗ್ರಾಮ ಪ್ರಮುಖ ಜೈನ ಕೇಂದ್ರವಾಗಿ ಗುರುತಿಸಿಕೊಂಡಿದ್ದಕ್ಕೆ ಸಾಕಷ್ಟು ಆಧಾರಗಳಿವೆ. ಗಂಗರ ದೊರೆ ಶಿವಮಾರ ಇಲ್ಲಿ ಭವ್ಯ ಜೈನ ಬಸದಿ ನಿರ್ಮಿಸಿದ್ದನು. ಕಾಲಕ್ರಮೇಣ ಅದು ಪಾಳುಬಿದ್ದಾಗ ಹೊಯ್ಸಳ ದೊರೆ ವಿನಯಾದಿತ್ಯ (1045-1098) ಬಸದಿ ಪುನರ್ನಿರ್ಮಿಸಿದ ಬಗ್ಗೆ ಶಾಸನ ವಿವರಿಸುತ್ತದೆ. ಈ ಶಾಸನದಲ್ಲಿ ''''''''ನೇಮಿಚಂದ್ರ ಸಿದ್ಧಾಂತದ ಭಟ್ಟಾರರಕ್ಕರಂ'''''''' ಹಾಗೂ ''''''''ಕೊಂಡಕೊಂಡ ಮುನಿಯಂ'''''''' ಎಂಬ ಉಲ್ಲೇಖಗಳಿವೆ.ಕ್ರಿ.ಶ. 969ರ ಶಾಸನ ಸುಂದರ ಕನ್ನಡ ಲಿಪಿಯಲ್ಲಿದ್ದು, ನೇಮಿಚಂದ್ರನ ಶಿಷ್ಯ ಅಭಯನಂದಿ ಪಕ್ವೋಪವಾಸ ವ್ರತ ಕೈ ಗೊಂಡು ಮರಣ ಹೊಂದಿದ ಸಂಗತಿ ದಾಖಲಿಸಿದೆ. ಅಲ್ಲದೆ, ಆತನ ಗುರುಪರಂಪರೆ ಮಾಹಿತಿಯನ್ನೂ ಒಳಗೊಂಡಿದೆ. ಶಾಸ ನದ ಆರಂಭದಲ್ಲಿ ವರ್ಧಮಾನ ತೀರ್ಥಂಕರನನ್ನು ಸ್ತುತಿಸಿರುವುದರಿಂದ ಈ ಬಸದಿ ವರ್ಧಮಾನ ತೀರ್ಥಂಕರರಿಗೆ ಸಮರ್ಪಿತ ವಾಗಿದ್ದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.ಜೈನ ಬಸದಿ ಸಂಪೂರ್ಣವಾಗಿ ನಾಶವಾಗಿದ್ದರೂ, ಅದರ ನಿರ್ಮಾಣ ಮತ್ತು ಪುನರ್ನಿರ್ಮಾಣದ ಇತಿಹಾಸ ಪ್ರಸ್ತುತ ಶಾಸನ ದೃಢಪಡಿಸುತ್ತದೆ.ಶಾಸನ ಸಂರಕ್ಷಣೆಗೆ ಅಧಿಕಾರಿಗಳ ಕ್ರಮ: ಅನಾಥವಾಗಿ ಬಿದ್ದಿದ್ದ ಈ ಶಾಸನದ ಮಾಹಿತಿ ಪಡೆದ ಇತಿಹಾಸ ತಜ್ಞ ಎಚ್.ಜಿ.ಶಶಿಧರ್ ಮತ್ತು ಸಂಶೋಧಕ ಸ್ವಾಮಿ ನಾಥನ್ ನಟರಾಜನ್ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್ ರನ್ನು ಸಂಪರ್ಕಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿ ಯಳಂಬಳಸೆ ಗ್ರಾಪಂ ಪಿಡಿಒ ಶುಭಲಕ್ಷ್ಮಿ ಅವರಿಗೆ ಶಾಸನದ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ಪರಿಶೀಲಿಸಿ ಶಾಸನ ಸಂರಕ್ಷಣೆಗೆ ಮುಂದಾಗಿದ್ದಾರೆ.ಹಿರಿಯ ಸಂಶೋಧಕ ಎಚ್.ಎಂ.ನಾಗರಾಜರಾವ್ ಅವರ ಶಿವಶೋಧ ಪುಸ್ತಕದಲ್ಲಿ ಈ ಶಾಸನದ ಪೂರ್ಣ ಪಾಠ ಪ್ರಕಟ ವಾಗಿತ್ತು. ಬಳಿಕ ನಾಪತ್ತೆಯಾಗಿದ್ದ ಶಾಸನ ಇದೀಗ ಮತ್ತೆ ಪತ್ತೆಯಾಗಿರುವುದು ಮಹತ್ವದ ಬೆಳವಣಿಗೆ. ವಿಷಯ ತಿಳಿದ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ ಶಾಸನದ ರಕ್ಷಣೆಗೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಸ್ವಾಮಿನಾಥನ್ ನಟರಾಜನ್ ತಿಳಿಸಿದ್ದಾರೆ.-- ಬಾಕ್ಸ್--''''''''ನಮ್ಮ ಊರು ನಮ್ಮ ಬೇರು'''''''' ಪರಿಕಲ್ಪನೆ:ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಯುವಜನ ಸೇವಾ ಇಲಾಖೆ ಜಿಲ್ಲಾ ನಿರ್ದೇಶಕರಾಗಿದ್ದ ಡಾ. ಮಂಜುಳಾ ಹುಲ್ಲಹಳ್ಳಿ ನಮ್ಮ ಊರು ನಮ್ಮ ಬೇರು ಎಂಬ ಪರಿಕಲ್ಪನೆಯಡಿ ವಿಶೇಷ ಕಾರ್ಯಕ್ರಮ ರೂಪಿಸಿದ್ದರು. ತಂಡವೊಂದನ್ನು ರಚಿಸಿ ಜಿಲ್ಲೆಯ ಎಲ್ಲ ಗ್ರಾಪಂಗಳ ವ್ಯಾಪ್ತಿಯ ಐತಿಹಾಸಿಕ ಸ್ಮಾರಕಗಳ ಮಾಹಿತಿ ಸಂಗ್ರಹಿಸಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿತ್ತು.ಪ್ರತಿ ಗ್ರಾಮದ ಶಾಸನಗಳು ಹಾಗೂ ಭಗ್ನಗೊಂಡ ವಿಗ್ರಹ ಆಯಾ ಗ್ರಾಮಗಳಲ್ಲಿಯೇ ಸಂರಕ್ಷಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮುಂದಾಗಿರುವುದು ಜಿಲ್ಲೆಯ ಐತಿಹಾಸಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.
