ಎಸ್.ಜಿ. ತೆಗ್ಗಿನಮನಿ
ನರಗುಂದ: ಅಳಿವಿನಂಚಿನಲ್ಲಿರುವ ಹೈನಿಡೇ ಕುಟುಂಬಕ್ಕೆ ಸೇರಿದ ಪಟ್ಟೆ ಕತ್ತೆಕಿರುಬ ಪ್ರಾಣಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಪತ್ತೆಯಾಗಿದ್ದು, ಇದು 8- 10 ದಿನದ ಹಿಂದೆ ಎರಡು ಮರಿಗಳಿಗೆ ಜನ್ಮ ನೀಡಿದೆ.ಸದ್ಯ ತಾಯಿ ಹೈನಾ ಮರಿಗಳೊಂದಿಗೆ ಗ್ರಾಮದ ಸಮೀಪದ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದ ಗುಡ್ಡದ ಗುಹೆಗಳ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯವರು ಸ್ಥಳಾಂತರ ಮಾಡಿದ್ದಾರೆ. ಇವು ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಆದರೆ ಬಯಲುಸೀಮೆ ಪ್ರದೇಶವಾಗಿರುವ ನರಗುಂದ ತಾಲೂಕಿನಲ್ಲಿ ಪ್ರತ್ಯಕ್ಷವಾಗಿರುವುದು ಆಶ್ಚರ್ಯ ಮೂಡಿಸಿದೆ.
ಪಟ್ಟೆ ಕತ್ತೆಕಿರುಬ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪಟ್ಟೆ ಕತ್ತೆಕಿರುಬಗಳು ಹಳದಿ ಮಿಶ್ರಿತ ಕಂದು, ಬೂದು ಅಥವಾ ಬಿಳಿ ಬಣ್ಣದ ತುಪ್ಪಳವನ್ನು ಹೊಂದಿದ್ದು, ಅದರ ಪಾರ್ಶ್ವಗಳು ಮತ್ತು ಕಾಲುಗಳ ಉದ್ದಕ್ಕೂ ಲಂಬವಾದ ಕಪ್ಪು ಪಟ್ಟೆಗಳಿಂದ ಆವೃತವಾಗಿರುತ್ತವೆ. ಅವು ಹೆಚ್ಚಾಗಿ ಕಪ್ಪು ಮೂತಿ ಮತ್ತು ಕುತ್ತಿಗೆಯಿಂದ ಬಾಲದವರೆಗೆ ವಿಸ್ತರಿಸಿರುವ ದಪ್ಪ, ಉದ್ದ, ಕಪ್ಪು ಜುಟ್ಟನ್ನು ಹೊಂದಿರುತ್ತವೆ. ಪಟ್ಟೆಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಎದ್ದು ಕಾಣುತ್ತವೆ. ಮುಂಗಾಲುಗಳು ಹಿಂಗಾಲುಗಳಿಗಿಂತ ಎತ್ತರವಿದ್ದು, ಈ ದೈಹಿಕ ರಚನೆ ಇವುಗಳ ವಿಶಿಷ್ಟ ನಡಿಗೆಗೆ ಕಾರಣವಾಗಿದೆ.ಕತ್ತೆಕಿರುಬದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪುಕಲ್ಪನೆ ಹೆಚ್ಚಿವೆ. ಇವು ಸಮಾಧಿಯಿಂದ ಹೂತ ಹೆಣಗಳನ್ನು ಅಗೆದು ತೆಗೆಯುತ್ತವೆಂಬ (ಸಮಾಧಿ ದರೋಡೆಕೋರರು) ಅಪಖ್ಯಾತಿ ಇದೆ. ಕತ್ತೆಕಿರುಬ(ಹೈನಾ)ಗಳನ್ನು ಬುದ್ಧಿವಂತ ಪ್ರಾಣಿ ಎಂದು ಕರೆಯಲಾಗುತ್ತದೆ. ಸತ್ತು, ಕೊಳೆತ ಪ್ರಾಣಿಗಳ ಮಾಂಸ ಅವುಗಳ ಪ್ರಮುಖ ಆಹಾರ. ಕೆಲವೋಮ್ಮೆ ನಾಯಿ ಮತ್ತು ಕುರಿಗಳನ್ನು ಹಾಗೂ ಸಣ್ಣಗಾತ್ರದ ಸಸ್ತನಿಗಳನ್ನು ಬೇಟೆಯಾಡಬಲ್ಲ ಸಾಮರ್ಥ್ಯ ಹೊಂದಿದ್ದು, ಮಾಂಸಾಹಾರಿಗಳಾಗಿದ್ದರೂ ಬೇಸಿಗೆ ಋತುವಿನಲ್ಲಿ ಸೌತೆಕಾಯಿ, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು ಸೇವಿಸುತ್ತವೆ.
ಹೈನಾಗಳು ನಾಚಿಕೆ ಸ್ವಭಾವದ ಪ್ರಾಣಿಗಳು ಮತ್ತು ಮನುಷ್ಯರನ್ನು ಕಂಡರೆ ಪಲಾಯನ ಮಾಡುತ್ತವೆ. ಅವು ದಾಳಿ ಮಾಡುವುದಿಲ್ಲ.
ಗುಹೆಯಲ್ಲಿ ವಾಸ: ಇದು ಮರಿಗಳಿಗೆ ಜನ್ಮ ನೀಡಿ, ಪೋಷಿಸಲು, ಹಗಲು ಸಮಯದಲ್ಲಿ ವಿಶ್ರಾಂತಿ ಪಡೆಯಲು ಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳನ್ನು ತನ್ನ ವಾಸಸ್ಥಾನ ಮಾಡಿಕೊಳ್ಳುತ್ತದೆ. ಭಾರತದಲ್ಲಿ ಪಟ್ಟೆ ಕತ್ತೆಕಿರುಬಗಳ ಸಂಖ್ಯೆ ಕುಸಿತಗೊಂಡಿದ್ದು, ಅಳಿವಿಂಚಿನ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವು ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972ರಡಿ ಇವುಗಳನ್ನು ಬೇಟೆಯಾಡುವುದು ಮತ್ತು ಕೊಲ್ಲುವುದು ಅಪರಾಧ ಎಂದು ಜೀವವೈವಿದ್ಯ ಸಂಶೋಧಕ ಮಂಜುನಾಥ ನಾಯಕ ಹೇಳಿದರು.
ಕಲ್ಲಾಪುರ ಗ್ರಾಮದಲ್ಲಿ ಕಂಡುಬಂದ ಪಟ್ಟೆ ಕತ್ತೆಕಿರುಬದ ಮಾಹಿತಿಯನ್ನು ರೈತರು ಮತ್ತು ಆನಂದ ಹಳೆಹೊಳಿ ಅವರು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ, ಸಂಗಮೇಶ ಕಡಗದ, ಶಶಿಕಾಂತ ಕಂಬನ್ನವರ, ಶರಣು ಗೌಡರ ರಾಜು ಮಂತಾ, ಆನಂದ ಹನಸಿ ಅವರ ಗಮನಕ್ಕೆ ತಂದಿದ್ದರು.ಜಾಗೃತಿ ಕಾರ್ಯಕ್ರಮ: ಪಟ್ಟೆ ಕತ್ತೆಕಿರುಬದ ಸಂತತಿಯನ್ನು ರಕ್ಷಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೈನಾ ಬಗ್ಗೆ ಸಾರ್ವಜನಿಕರು ಭಯ ಮತ್ತು ಆತಂಕ ಪಡುವ ಅಗತ್ಯವಿಲ್ಲ. ಮಾನವ- ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಅರಣ್ಯ ವಿಭಾಗದ ಡಿಸಿಎಫ್ ಸಂತೋಷಕುಮಾರ ಕೆಂಚಪ್ಪನವರ ತಿಳಿಸಿದರು.