ಸಾರಾಂಶ
ಧಾರವಾಡ:
ಈಚೆಗೆ ಜಿಲ್ಲೆಯ ಹಂತದ ನ್ಯಾಯಾಲಯಗಳಲ್ಲಿ ಆಯೋಜಿಸಿದ್ದ ಲೋಕ ಅದಾಲತ್ ಯಶಸ್ವಿಯಾಗಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 13 ಪೀಠಗಳು, ಹುಬ್ಬಳ್ಳಿಯಲ್ಲಿ 18 ಪೀಠಗಳು, ಕುಂದಗೋಳ 2, ನವಲಗುಂದ 2 ಮತ್ತು ಕಲಘಟಗಿಯಲ್ಲಿ 2 ಸೇರಿದಂತೆ ಒಟ್ಟು 37 ಪೀಠಗಳಲ್ಲಿ 78488 ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಯಿತು.ಧಾರವಾಡದ ಕೌಟುಂಬಿಕ ನ್ಯಾಯಾಲಯದ ಪೀಠಾಧೀಶರಾದ ಸುವರ್ಣ ಮಿರ್ಜಿ ಮತ್ತು ಸಂಧಾನಕಾರ ಪುಷ್ಪಾ ಪಾಟೀಲ ಅವರನ್ನೊಳಗೊಂಡ ಲೋಕ್ ಅದಾಲತ್ ಪೀಠದಲ್ಲಿ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಭಾಗವಹಿಸಿ ಎರಡು ಜೋಡಿ ಸತಿ-ಪತಿ ಒಂದಾಗಿಸುವಲ್ಲಿ ಯಶಸ್ವಿಯಾದರು. ಹುಬ್ಬಳ್ಳಿಯ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಇಂಧಿರಾ ಚೆಟ್ಟಿಯಾರ್ ಮತ್ತು ಸಂಧಾನಕಾರ ಸವಿತಾ ಪಾಟೀಲ ಇವರನ್ನೊಳಗೊಂಡ ಲೋಕ್ ಅದಾಲತ್ ಪೀಠದ ಬೈಠಕ್‌ನಲ್ಲಿ ಎಂಟು ಜೋಡಿ ಸತಿ-ಪತಿಗಳು ಹೊಸ ಜೀವನ ಶುರು ಮಾಡಿದರು. ಅದೇ ರೀತಿ ಅಧಿಕ ಕೌಟುಂಬಿಕ ನ್ಯಾಯಾಲಯದಲ್ಲಿ ಆರು ಜೋಡಿ, ಕುಂದಗೋಳದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಜೆ. ಪರಮೇಶ್ವರ ಮತ್ತು ನ್ಯಾಯವಾದಿ ಸಂಧಾನಕಾರ ವಿನಾಯಕ ಹಡಪದ ಒಂದು ಕೌಟುಂಬಿಕ ವ್ಯಾಜ್ಯ ಬಗೆಹರಿಸಿದರು. ಜಿಲ್ಲೆಯ ಒಟ್ಟು 17 ಜೋಡಿ ದಂಪತಿಗಳನ್ನು ಒಂದು ಮಾಡಲಾಯಿತು.
₹ 2 ಕೋಟಿ ಪರಿಹಾರ:ಧಾರವಾಡದ ನ್ಯಾಯಾಧೀಶ ಸಂಜಯ ಗುಡಗುಡಿ ಮತ್ತು ಸಂಧಾನಕಾರ ಪ್ರಕಾಶ ರಟಗೇರಿ ಅವರನ್ನೊಳಗೊಂಡ ರಾಜಿಯಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ವಿಮಾ ಕಂಪನಿ ಮೃತನ ವಾರಸುದಾರರಾದ ಅರ್ಜಿದಾರರಿಗೆ ₹ 2 ಕೋಟಿ ಪರಿಹಾರ ನೀಡಲು ಒಪ್ಪಿ ರಾಜಿ ಮಾಡಲಾಯಿತು. ಹುಬ್ಬಳ್ಳಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿನ್ನಣ್ಣವರ ಅವರ ನ್ಯಾಯಾಲಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಆರ್.ಬಿ. ಪಾಟೀಲ ಅವರು ತಮ್ಮ ಕುಟುಂಬದವರೊಂದಿಗೆ ರಾಜಿ ಮಾಡಿಕೊಂಡಿದ್ದು ಅದರಲ್ಲಿ 82 ವರ್ಷದ ಅವರ ತಾಯಿ ಸಹ ಪಾಲ್ಗೊಂಡಿದ್ದರು. ಹುಬ್ಬಳ್ಳಿಯ ಔದ್ಯಮಿಕ ನ್ಯಾಯಮಂಡಳಿಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳಲ್ಲಿ 200 ಜನ ಉದ್ಯೋಗಿಗಳನ್ನು ಧಾರವಾಡದ ಟಾಟಾ ಮಾರ್ಕೋಪೋಲೊ ಮೋಟಾರ್ಸ್ ಕಂಪನಿಯು ಪುನಃ ಕೆಲಸಕ್ಕೆ ಸೇರಿಸಿಕೊಂಡಿದೆ. ವಿವಿಧ ರೀತಿಯ ಹಾಗೂ ವಿವಿಧ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜೀ ಆಗಬಹುದಾದಂತಹ 17,995 ಪ್ರಕರಣಗಳ ಪೈಕಿ 13,284 ಪ್ರಕರಣ ಹಾಗೂ 66,677 ವ್ಯಾಜ್ಯ ಪೂರ್ವ ಪ್ರಕರಣ ತೆಗೆದುಕೊಂಡು ಅವುಗಳ ಪೈಕಿ 66,296 ಪ್ರಕರಣಗಳನ್ನು ಸೇರಿ ಒಟ್ಟು 78,488 ರಾಜೀ ಸಂಧಾನ ಮಾಡಿಸಿ, ಒಟ್ಟು ₹ 19.43 ಕೋಟಿ ಮೊತ್ತ ವಸೂಲು ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ತಿಳಿಸಿದ್ದಾರೆ.