ರಾಷ್ಟ್ರೀಯ ಮರಾಠಾ ಪಕ್ಷದ ಅಭ್ಯರ್ಥಿಗಳು ಕಣಕ್ಕೆ: ವಿಎಸ್‌ ಶಾಮಸುಂದರ

| Published : Mar 24 2024, 01:35 AM IST

ರಾಷ್ಟ್ರೀಯ ಮರಾಠಾ ಪಕ್ಷದ ಅಭ್ಯರ್ಥಿಗಳು ಕಣಕ್ಕೆ: ವಿಎಸ್‌ ಶಾಮಸುಂದರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ 28 ಲೋಕಸಭೆ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲೂ ನಮ್ಮ ಸಮಾಜಕ್ಕೆ ಟಿಕೆಟ್‌ ನೀಡಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ತಾನು ಅಧಿಕಾರಕ್ಕೆ ಬಂದರೆ ಮರಾಠಿಗರಿಗೆ ಸೂಕ್ತ ಪ್ರಾತಿನಿಧ್ಯ ನೀಡುವದಾಗಿ, ನಮ್ಮ ಸಮಾಜಕ್ಕೆ 2ಎ ಮಾನ್ಯತೆ ನೀಡುವದಾಗಿ ಹೇಳಿ ಮಾತು ತಪ್ಪಿದರು ಎಂದು ವಿಎಸ್‌ ಶಾಮಸುಂದರ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಲೋಕಸಭೆ ಚುನಾವಣೆಗಾಗಿ ರಾಜ್ಯದ 10 ಕಡೆ ರಾಷ್ಟ್ರೀಯ ಮರಾಠಾ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಿರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಮರಾಠಾ ಪಕ್ಷದ ಉಪಾಧ್ಯಕ್ಷ ವಿಎಸ್‌ ಶಾಮಸುಂದರ ತಿಳಿಸಿದರು.

ಅವರು ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅತಿ ಹೆಚ್ಚು ಮರಾಠಿಗರು ಇರುವ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಶಾಮಸುಂದರ ಗಾಯಕವಾಡ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಧಾರವಾಡಕ್ಕೆ ಜಿ.ಡಿ ಘೋರ್ಪಡೆ, ಹಾವೇರಿಯಲ್ಲಿ ನಾರಾಯಣರಾವ್‌ ಗಾಯಕವಾಡ, ಬೆಳಗಾವಿಯಲ್ಲಿ ನ್ಯಾಯವಾದಿ ಈಶ್ವರ ರುದ್ರಪ್ಪ ಗಾಡಿ, ಚಿಕ್ಕೋಡಿಯಲ್ಲಿ ವಿನೋದ ಸಾಳುಂಕೆ, ಬೀದರ್‌ ಲೋಕಸಭೆ ಚುನಾವಣೆಯಲ್ಲಿ ವಿಜಯಕುಮಾರ ಪಾಟೀಲ ಕಣಜಿಕರ್‌, ಬಾಗಲಕೋಟೆಗೆ ಶ್ರೀಕಾಂತ ಮುಧೋಳ, ಶಿವಮೊಗ್ಗ ಕ್ಷೇತ್ರಕ್ಕೆ ದೇವರಾಜ ಶಿಂಧೆ, ವಿಜಯಪುರ ಹಾಗೂ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಎಸ್‌ಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದೆಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯದಲ್ಲಿ ಮರಾಠಿಗರಿಗೆ ಅನ್ಯಾಯ ಮಾಡಿದೆ: ಬಿಜೆಪಿ ರಾಜ್ಯದಲ್ಲಿ ಮರಾಠಿಗರಿಗೆ ಘೋರ ಅನ್ಯಾಯ ಮಾಡಿದ್ದು, 28 ಲೋಕಸಭೆ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲೂ ನಮ್ಮ ಸಮಾಜಕ್ಕೆ ಟಿಕೆಟ್‌ ನೀಡಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ತಾನು ಅಧಿಕಾರಕ್ಕೆ ಬಂದರೆ ಮರಾಠಿಗರಿಗೆ ಸೂಕ್ತ ಪ್ರಾತಿನಿಧ್ಯ ನೀಡುವದಾಗಿ, ನಮ್ಮ ಸಮಾಜಕ್ಕೆ 2ಎ ಮಾನ್ಯತೆ ನೀಡುವದಾಗಿ ಹೇಳಿ ಮಾತು ತಪ್ಪಿದರು. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದೇವೆ. ಕಾಂಗ್ರೆಸ್‌ನವರು ಕನಿಷ್ಟ ರಾಜ್ಯದ ಮಂತ್ರಿಮಂಡಳದಲ್ಲಿ ನಮ್ಮ ಸಮಾಜದ ಸಂತೋಷ ಲಾಡ್‌ಗೆ ಒಳ್ಳೆಯ ಹುದ್ದೆ ನೀಡಿ ಗೌರವಿಸಿದ್ದಾರೆ ಎಂದರು.

ಯಾವುದೇ ಕಾರಣಕ್ಕೂ ಎಂಇಎಸ್‌ಗೆ ಬೆಂಬಲಿಸಲ್ಲ: ನಾವು ನೆಲದ ಮಣ್ಣಿನ ಮಕ್ಕಳು. ಈ ನೆಲ, ಜಲಕ್ಕಾಗಿ ನಮ್ಮ ತ್ಯಾಗ ಸದಾ ಇದ್ದೆ ಇರುತ್ತದೆ. ಯಾವುದೇ ಕಾರಣಕ್ಕೂ ನಾವು ಮರಾಠಾ ಏಕೀಕರಣ ಸಮಿತಿ ಜೊತೆ ಕೈ ಜೋಡಿಸುವುದಿಲ್ಲ. ಮಹಾಜನ ವರದಿ ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ತೀರ್ಪು ಏನೇ ಬಂದರೂ ಅದನ್ನು ಗೌರವಿಸುತ್ತೇವೆ. ಈ ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ನಮಗೆ ರಾಜ್ಯದಲ್ಲಿ ಪ್ರಾತಿನಿಧ್ಯ ದೊರೆಯದೇ ಇರುವುದು ವಿಪರ್ಯಾಸ ಎಂದರು.

ಜನರ ಸೇವೆಯೇ ನನ್ನ ಪರಮೋದ್ದೇಶ: ರಾಜಕೀಯವಾಗಿ ನಾನು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಒಂದು ಬಾರಿ ತಾನು ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಭಗವಂತ ಖೂಬಾ ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿದ್ದರೆ ಕಾಂಗ್ರೆಸ್‌ನಿಂದ ಸಾಗರ ಖಂಡ್ರೆ ಇನ್ನೂ ಹಸುಳೆ ಬಾಲಕ. ಹಾಗಾಗಿ ನನಗೆ ನಮ್ಮ ಸಮಾಜ ಅಷ್ಟೆ ಅಲ್ಲ ಎಲ್ಲ ಧರ್ಮಿಯರ, ಎಲ್ಲ ಜಾತಿ ಜನಾಂಗದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ನನಗೆ ಲೋಕಸಭೆಯಲ್ಲಿ ಮತದಾರರು ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ ಎಂದರು.

ಸಮಾಜದ ಮುಖಂಡರು ಹಾಗೂ ನಿವೃತ್ತ ಪ್ರಾಚಾರ್ಯರಾದ ಗೋವಿಂದರಾವ ಜಾಧವ ಸುದ್ದಿಗೋಷ್ಠಿಯಲ್ಲಿದ್ದರು.