ಸಾರಾಂಶ
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಅಧೀನದ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ, ಚಿಕಿತ್ಸೆ ಶುಲ್ಕ, ಪ್ರಮಾಣಪತ್ರ ನೀಡುವ ದರವನ್ನು ಶೇಕಡ 20ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಮುಂದೆ ಆರೋಗ್ಯ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಹ ಶುಲ್ಕ ಪರಿಷ್ಕರಣೆ ಆಗುವ ಸಾಧ್ಯತೆಯಿದೆ ಎಂಬ ಸುಳಿವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಅಧೀನದ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ, ಚಿಕಿತ್ಸೆ ಶುಲ್ಕ, ಪ್ರಮಾಣಪತ್ರ ನೀಡುವ ದರವನ್ನು ಶೇಕಡ 20ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಮುಂದೆ ಆರೋಗ್ಯ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಹ ಶುಲ್ಕ ಪರಿಷ್ಕರಣೆ ಆಗುವ ಸಾಧ್ಯತೆಯಿದೆ ಎಂಬ ಸುಳಿವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ.ಬಿಎಂಸಿಆರ್‌ಐ ವ್ಯಾಪ್ತಿಯ ಆಸ್ಪತ್ರೆಗಳ ಪರಿಷ್ಕೃತ ದರವನ್ನು ನ.1ರಿಂದ ಜಾರಿಗೆ ಬರುವಂತೆ ಬಿಎಂಸಿಆರ್‌ಐ ನಿರ್ದೇಶಕರು ಆದೇಶ ಹೊರಡಿಸಿದ್ದರು. ಅದರಂತೆ ನಗರದ ವಿಕ್ಟೋರಿಯಾ, ವಾಣಿವಿಲಾಸ, ಸೂಪರ್ ಸ್ಪೆಷಾಲಿಟಿ, ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಕೇಂದ್ರಗಳಲ್ಲಿ ನೀಡಲಾಗುವ ಚಿಕಿತ್ಸೆಗಳ ದರ ಮಾತ್ರ ಸದ್ಯಕ್ಕೆ ಏರಿಕೆಯಾಗಿದೆ.
ಇದೇ ವರ್ಷ ಮೇ ತಿಂಗಳಲ್ಲಿ ನಡೆದಿದ್ದ ಬಿಎಂಸಿಆರ್‌ಐ ಸಂಸ್ಥೆಯ ಸಭೆಯಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ವಿವಿಧ ರೀತಿಯ ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ವಿಧಿಸಿದ ಶುಲ್ಕ ಪರಿಷ್ಕೃತಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.ಎಷ್ಟು ಹೆಚ್ಚಳ:
ಆ ವೇಳೆ ಇಬ್ಬರು ರೋಗಿಗಳಿರುವ ಸ್ಪೆಷಲ್ ವಾರ್ಡ್ ದರವನ್ನು ₹750ರಿಂದ ₹1000, ಸ್ಪೆಷಲ್ ವಾರ್ಡ್ ಸಿಂಗಲ್ ಬೆಡ್ ದರ ₹750 ರಿಂದ ₹2000, ಜನರಲ್ ವಾರ್ಡ್ ದರ ₹15 ರಿಂದ ₹20, ಒಪಿಡಿ ನೋಂದಣಿ ದರ ₹10 ನಿಂದ ₹20, ಒಳರೋಗಿ ನೋಂದಣಿ ದರ ₹25ರಿಂದ ₹50, ಒಳರೋಗಿ ಹಾಸಿಗೆ ದರ ₹30ರಿಂದ ₹50, ಮರಣೋತ್ತರ, ಮೆಡಿಕಲ್ ಪರೀಕ್ಷೆ, ಗಾಯ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಯ ಪ್ರಮಾಣ ಪತ್ರದ ಶುಲ್ಕ ₹250ರಿಂದ ₹300, ಮೆಡಿಕಲ್ ಬೋರ್ಡ್ ಪ್ರಮಾಣ ಪತ್ರ ₹350ರಿಂದ ₹500ಕ್ಕೆ ಏರಿಕೆ ಮಾಡಲಾಗಿದೆ.ಇನ್ನೂ ಹೊಸದಾಗಿ ಡಯೇಟ್ (ಆಹಾರ ಪಥ್ಯ) ₹50 ಹಾಗೂ ಡಯೇಟ್ ಕುರಿತ ಸಮಾಲೋಚನೆಗೆ ₹100 ಶುಲ್ಕ ನಿಗದಿಸಲಾಗಿತ್ತು.ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಲವು ವರ್ಷಗಳಿಂದ ದರ ಪರಿಷ್ಕರಣೆಯಾಗಿರಲಿಲ್ಲ. ಹೀಗಾಗಿ ಬಡವರಿಗೆ ಹೊರೆ ಆಗದಂತೆ, ಕನಿಷ್ಠ ಮಟ್ಟದಲ್ಲಿ ದರ ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿಯ ಆಸ್ಪತ್ರೆಗಳಲ್ಲಿ ಕೆಲ ಶುಲ್ಕಗಳ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಸಂಬಂಧ ಹೇಳುತ್ತಿದ್ದೇವೆ. ಬಿಪಿಎಲ್ ಕಾರ್ಡುದಾರರಿಗೆ ದರ ಹೆಚ್ಚಳ ಮಾಡಬಾರದು, ಎಪಿಎಲ್ ಕಾರ್ಡುದಾರರಿಗೆ ಹೊರೆ ಆಗದಂತೆ ಶುಲ್ಕ ಏರಿಕೆ ಮಾಡುವಂತೆ ಹೇಳಿದ್ದೇವೆ ಎಂದರು.
ಕೋವಿಡ್‌ಗೂ ಮುನ್ನ ಈ ಶುಲ್ಕ ಹೆಚ್ಚಿಸಲಾಗಿತ್ತು. ಹೆಚ್ಚಳವಾದ ಶುಲ್ಕದ ಮೊತ್ತ ಸರ್ಕಾರಕ್ಕೆ ಬರುವುದಿಲ್ಲ. ಆಯಾ ಆಸ್ಪತ್ರೆಗಳ ಸಮಿತಿಯು ಆಸ್ಪತ್ರೆಯ ಸಣ್ಣಪುಟ್ಟ ಖರ್ಚು, ಅಭಿವೃದ್ಧಿ, ರಿಪೇರಿ, ಸ್ವಚ್ಛತೆ ಮತ್ತಿತರ ಕೆಲಸಕ್ಕೆ ಬಳಸಲಿವೆ. ಪರಿಷ್ಕೃತ ದರ ಜನರಿಗೆ ಹೆಚ್ಚಳ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.ಗ್ಯಾರಂಟಿಗೆ ತಳುಕು ಹಾಕುವುದು ತಪ್ಪು
ಶುಲ್ಕ ಪರಿಷ್ಕರಣೆಗೂ ಗ್ಯಾರೆಂಟಿ ಯೋಜನೆಗೂ ಸಂಬಂಧವಿಲ್ಲ. ಸರ್ಕಾರ ಏನೇ ಮಾಡಿದರೂ ಗ್ಯಾರಂಟಿಗೆ ತಳುಕು ಹಾಕುವುದು ಸರಿಯಲ್ಲ. ಹಿಂದಿನ ಸರ್ಕಾರಗಳು ಯಾವುದೇ ದರ ಏರಿಸಿಲ್ಲವೆ? ಆರೋಗ್ಯ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ದರ ಪರಿಷ್ಕೃಣೆ ಮಾಡುವ ಬಗ್ಗೆ ಹೇಳಿದ್ದೇವೆ.-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.