ಕಲಾ ಮೇಳದಲ್ಲಿ ಪಾಲ್ಗೊಂಡಿದ್ದ ಸುಮಾರು 600ಕ್ಕೂ ಹೆಚ್ಚು ಕಲಾವಿದರು 10.30ರವರೆಗೆ ಚೆಲುವನಾರಾಯಣಸ್ವಾಮಿಗೆ ಕಲಾರಾಧನೆಯ ಸೇವೆ ಮಾಡಿದರು. ಬಿಸಿಲು ಮಾರಮ್ಮನ ಸನ್ನಿಧಿಯ ಬಳಿ ಚೆಲುವನಾರಾಯಣ ಸ್ವಾಮಿಗೆ ಸೂರ್ಯನ ರಶ್ಮಿ ಬಿದ್ದ ನಂತರ ಮಹೋತ್ಸವ ಮುಂದುವರೆಸಲಾಯಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿಯ ವಿಶ್ವಾವ ಸುಸಂವತ್ಸರದ ರಥ ಸಪ್ತಮಿ ಮಹೋತ್ಸವವು ವೈವಿಧ್ಯಮಯ ಜನಪದ ಕಲಾ ತಂಡಗಳ ಜಾನಪದ ಕಲಾರಾಧನೆಯೊಂದಿಗೆ ವೈಭವದಿಂದ ಭಾನುವಾರ ನೆರವೇರಿತು.ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 27ನೇವರ್ಷದ ರಾಜ್ಯ ಮಟ್ಟದ ಜಾನಪದ ಕಲಾ ಮೇಳದಲ್ಲಿ ಪಾಲ್ಗೊಂಡ ನೂರಾರು ಜನಪದ ಕಲಾವಿದರ ವೈವಿಧ್ಯಮಯ ಕಲಾ ತಂಡಗಳು ಚೆಲುವನಾರಾಯಣಸ್ವಾಮಿಗೆ ಭಕ್ತಿ ಪೂರ್ವಕವಾಗಿ ಕಲಾರಾಧನೆ ನೆರವೇರಿಸಿದರು. ಇದರೊಂದಿಗೆ ರಥ ಸಪ್ತಮಿ ಉತ್ಸವ ಅದ್ಧೂರಿಯಾಗಿ ನೆರವೇರಿತು.
ಬೆಳಗಿನ 6.45ರ ವೇಳೆಗೆ ಮೇಲುಕೋಟೆಗೆ ಆಗಮಿಸಿದ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಧನಲಕ್ಷ್ಮಿ ದಂಪತಿ ಕಲಾ ಮೇಳಕ್ಕೆ ಚಾಲನೆ ನೀಡಿದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮೈಸೂರು ಮೂಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ ಬಸವರೆಡ್ಡಪ್ಪ, ಜಾನಪದ ಕಲಾ ಮೇಳದ ಆಯೋಜಕರಾದ ಯತಿರಾಜದಾಸರ್ ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಸೌಮ್ಯ ಸಂತಾನಂ, ಜಾನಪದ ಕಲಾವಿದ ಶಿವಣ್ಣಗೌಡ, ದೇಗುಲದ ಇಒ ಶೀಲಾ ಸಾಥ್ ನೀಡಿದರು.ನಂತರ 7.30ಕ್ಕೆ ಚೆಲುವನಾರಾಯಣಸ್ವಾಮಿಯ ಸೂರ್ಯ ಮಂಡಲ ವಾಹನೋತ್ಸವದ ತೇರೆಳೆಯುವ ಮೂಲಕ ರಥಸಪ್ತಮಿಗೆ ಚಾಲನೆ ನೀಡಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಚೆಲುವನಾರಾಯಣಸ್ವಾಮಿ ರಥಸಪ್ತಮಿ ಉತ್ಸವ ಆರಂಭವಾಗುತ್ತಿದ್ದಂತೆ ಮೇಲುಕೋಟೆ ಉತ್ಸವ ಬೀದಿಗಳೇ ಕಲಾರಾಧನೆಯ ವೇದಿಕೆಯಾಗಿ ಜಾನಪದ ಲೋಕವೇ ಅನಾವರಣಗೊಂಡಿತು.
ಕಲಾ ಮೇಳದಲ್ಲಿ ಪಾಲ್ಗೊಂಡಿದ್ದ ಸುಮಾರು 600ಕ್ಕೂ ಹೆಚ್ಚು ಕಲಾವಿದರು 10.30ರವರೆಗೆ ಚೆಲುವನಾರಾಯಣಸ್ವಾಮಿಗೆ ಕಲಾರಾಧನೆಯ ಸೇವೆ ಮಾಡಿದರು. ಬಿಸಿಲು ಮಾರಮ್ಮನ ಸನ್ನಿಧಿಯ ಬಳಿ ಚೆಲುವನಾರಾಯಣ ಸ್ವಾಮಿಗೆ ಸೂರ್ಯನ ರಶ್ಮಿ ಬಿದ್ದ ನಂತರ ಮಹೋತ್ಸವ ಮುಂದುವರೆಸಲಾಯಿತು.ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ನಡೆದ ಜಾನಪದ ಜಾತ್ರೆಯಲ್ಲಿ ತಮಟೆ ನಗಾರಿ, ಚಂಡೆಗಳ ನೀನಾದ ಮೈನವಿರೇಳುವಂತೆ ಮಾಡಿದರೆ ಗಾರುಡಿ ಗೊಂಬೆಗಳ ನರ್ತನ ನೋಡುಗರನ್ನು ಜನಪದ ಲೋಕಕ್ಕೆ ಕರೆದೊಯ್ಯಿತು. ಕೇರಳದ ಚೆಂಡೆ ಮೇಳ, ಚಿಲಿಪಿಲಿ ಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಾಮರಾಜನಗರದ ಹುಲಿವೇಷ, ಕರಗದ ನೃತ್ಯ, ಮೈಸೂರು ನಗಾರಿ, ನಾಸಿಕ್ ಡೋಲ್, ಕರಡಿ ಮಜಲು ಪಟಾ ಕುಣಿತ. ಗಾರುಡಿ ಗೊಂಬೆ, ಕೋಲಾಟ, ಡೊಳ್ಳು ಕುಣಿತ, ಜಾಂಜ್ ಮೇಳ, ಸೋಮನ ಕುಣಿತ, ಚಕ್ರಾದಿ ಬಳೆ, ಖಡ್ಗ ಪವಾಡ, ವೀರಭದ್ರನ ಕುಣಿತ, ಶಾಲಾ ಮಕ್ಕಳ 101 ಕಳಶ, ವೀರಮಕ್ಕಳ ಕುಣಿತ, ಕಂಸಾಳೆ, ನಾದಸ್ವರ, ಚಂಡೆ ನಗಾರಿ, ಜಡೆ ಕೋಲಾಟ, ಚಿಂಪಾಂಜಿಗಳ ನರ್ತನ, ಕುಡುಕರ ವಾಲಾಟದ ಗೊಂಬೆಗಳು, ದಾಸಯ್ಯರ ದರ್ಶನ, ಮಹಿಳಾ ಡೊಳ್ಳು, ಯಕ್ಷಗಾನ ಗೊಂಬೆಗಳು, ಕೋಳಿ ನೃತ್ಯ, ಕರಡಿ ಕುಣಿತ ಸೇರಿದಂತೆ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸುವ ಜಾನಪದ ಕಲಾ ಪ್ರಕಾರಗಳ ಬಹುತೇಕ ತಂಡಗಳು ಪಾಂಡವಪುರ ಜಿಜೆಸಿ ಮಕ್ಕಳ ಬ್ಯಾಂಡ್, ಪ್ರಾಥಮಿಕ ಶಾಲೆ ಮಕ್ಕಳು ಕಳಸದ ತಂಡಗಳು ಭಾಗವಹಿಸಿದ್ದವು.
ರಥಸಪ್ತಮಿ ಮಹೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗಳಿಗೆ ದೀಪಾಲಂಕಾರ ಮಾಡಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು.