ಮನುಷ್ಯ ತನ್ನ ಮನೆಯ ವಾಸ್ತು ಬದಲಾಯಿಸುವುದಕ್ಕಿಂತ ಮನದ ವಾಸ್ತು ಬದಲಾಯಿಸಿಕೊಂಡರೆ ಬದುಕು ಸುಂದರವಾಗಿ ಸಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುತ್ತಲ: ಮನುಷ್ಯ ತನ್ನ ಮನೆಯ ವಾಸ್ತು ಬದಲಾಯಿಸುವುದಕ್ಕಿಂತ ಮನದ ವಾಸ್ತು ಬದಲಾಯಿಸಿಕೊಂಡರೆ ಬದುಕು ಸುಂದರವಾಗಿ ಸಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ನೆಗಳೂರ ಗ್ರಾಮದಲ್ಲಿ ಜರುಗುತ್ತಿರುವ ಶ್ರೀಮಠದ ಜಾತ್ರಾಮಹೋತ್ಸವದ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಮನೆಗೆ ಯಾವ ರೀತಿ ದಿಕ್ಕು, ಬಾಗಿಲು, ಕೋಣೆಗಳ ವಿನ್ಯಾಸ ಬದಲಾಯಿಸಿದರೆ ಮನೆ ಪರಿಸ್ಥಿತಿ ಬದಲಾಗಬಹುದು. ಆದರೆ ನಿಜವಾದ ಶಾಂತಿ, ಸಂತೋಷ ಸಮೃದ್ಧಿಗಳೆಲ್ಲವೂ ಮನಸ್ಸಿನೊಳಗಿಂದಲೇ ಬರುತ್ತವೆ. ಮನದ ವಾಸ್ತು ಸರಿಯಾಗಿಲ್ಲದಿದ್ದರೆ, ಎಷ್ಟೇ ದೊಡ್ಡ ಮನೆ ಇದ್ದರೂ ನೆಮ್ಮದಿ ಸಿಗುವುದಿಲ್ಲ. ಮನೆ ಕಟ್ಟವುದು ಸುಲಭ. ಆದರೆ ಮನಸ್ಸನ್ನು ಕಟ್ಟುವುದು ಮಹತ್ತರ ಸಾಧನೆ. ಮನಸ್ಸು ಶುದ್ಧವಾಗಿದ್ದರೆ ಯಾವ ಮನೆಯಿದ್ದರೂ ಅದು ದೇವಾಲಯದಂತೆ ಕಾಣುತ್ತದೆ. ಮನಸ್ಸು ಶುದ್ಧಗೊಳಿಸಿದರೆ ಜೀವನ ಸುಂದರವಾಗುತ್ತದೆ ಎಂದರು.ಪ್ರವಚನಕಾರ ಪುಟ್ಟರಾಜ ಶಾಸ್ತ್ರೀಜಿ ಮಾತನಾಡಿ, ಮನುಷ್ಯನ ಸಂಬಂಧಗಳು ಸಡಿಲಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಂಸ್ಕಾರ ಸದ್ವಿಚಾರಗಳ ಮೂಲಕ ಸಂಬಂಧಗಳನ್ನು ಬೆಸೆಯುವ ಅವಶ್ಯಕತೆಯಿದೆ. ಅದಕ್ಕಾಗಿಯೇ ಮಹಾತ್ಮರ ಜೀವನ ಚರಿತ್ರೆಗಳನ್ನು ಆಲಿಸಿ, ಅವರ ತತ್ವಾದರ್ಶಗಳನ್ನು ಸ್ವಲ್ಪ ಮಟ್ಟಿಗಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದು ಎಂದರು.
ಕುಂದರಗಿ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಡಗಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಹಾಪುರ ಹಿರೇಮಠದ ನಿಜಗುಣದೇವರು, ಮಣ್ಣೂರ, ಕಲ್ಲೇದೇವರ, ಹೆಸರೂರ, ನೆಗಳೂರ ಗ್ರಾಮಗಳ ಸದ್ಭಕ್ತರಿದ್ದರು. ನೆಗಳೂರಿನ ರಾಜಪ್ಪ ತಾವರೆ ಸ್ಮರಣಾರ್ಥ ತಾವರೆ ಪರಿವಾರದವರಿಂದ ದಾಸೋಹ ಸೇವೆ ಜರುಗಿತು. ಶಿವಲಿಂಗಯ್ಯ ಗವಾಯಿ ಹಿರೇಮಠ ಬಿಳೇಬಾಳ ಮತ್ತು ಅಡಿವೇಶಕುಮಾರ ಬೆಳಗಾವಿ ಸಂಗೀತ ಕಾರ್ಯಕ್ರಮ ಜರುಗಿತು. ಗುರುಶಾಂತಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.