ರದ್ದಾದ ಗದಗ ಶಿವಾನಂದ ಮಠದ ರಥೋತ್ಸವ, ಭಕ್ತರ ಬೇಸರ

| Published : Mar 10 2024, 01:32 AM IST

ಸಾರಾಂಶ

ಶಿವಾನಂದ ಮಠದ ಉತ್ತರಾಧಿಕಾರದ ವಿಷಯ ತಾರಕಕ್ಕೆ ಏರಿದ್ದರಿಂದ ಶನಿವಾರ ನಡೆಯಬೇಕಾಗಿದ್ದ ಮಹಾರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ಸೇರಿದಂತೆ ಜಾತ್ರಾ ಕಾರ್ಯಕ್ರಮಗಳು ಸಂಪೂರ್ಣ ರದ್ದಾಗಿದ್ದು, ಶ್ರೀಮಠದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇಂತಹ ಘಟನೆ ನಡೆಯಿತು.

ಗದಗ: ಇಲ್ಲಿಯ ಶಿವಾನಂದ ಮಠದ ಉತ್ತರಾಧಿಕಾರದ ವಿಷಯ ತಾರಕಕ್ಕೆ ಏರಿದ್ದರಿಂದ ಶನಿವಾರ ನಡೆಯಬೇಕಾಗಿದ್ದ ಮಹಾರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ಸೇರಿದಂತೆ ಜಾತ್ರಾ ಕಾರ್ಯಕ್ರಮಗಳು ಸಂಪೂರ್ಣ ರದ್ದಾಗಿದ್ದು, ಶ್ರೀಮಠದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇಂತಹ ಘಟನೆ ನಡೆಯಿತು. ನಾಲ್ಕು ವರ್ಷಗಳ ಹಿಂದೆ ಶಿವಾನಂದ ಮಠದ ಉತ್ತರಾಧಿಕಾರಿಯನ್ನಾಗಿ ಶಿವಾನಂದ ಮಠದ ಘೋಡಗೇರಿ ಶಾಖಾ ಮಠದ ಕೈವಲ್ಯಾನಂದ ಶ್ರೀಗಳನ್ನು ನೇಮಿಸಲಾಗಿತ್ತು. ಆದರೆ, ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಒಮ್ಮಿಂದೊಮ್ಮೆಲೆ ಕಿರಿಯ ಶ್ರೀಗಳನ್ನು ಉತ್ತರಾಧಿಕಾರಿ ಹುದ್ದೆಯಿಂದ ವಜಾಗೊಳಿಸಿರುವುದಾಗಿ ಹೇಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆ ಮಾಡಿಸಿದ್ದರು. ಹಿರಿಯ ಶ್ರೀಗಳ ನಡವಳಿಕೆ ಖಂಡಿಸಿ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿ ಧಾರವಾಡದ ಹೈಕೋರ್ಟ್‌ ಪೀಠದ ಮೆಟ್ಟಿಲೇರಿದ್ದರು. ಕಳೆದ 20 ದಿನಗಳಿಂದ ಈ ವಿಷಯವಾಗಿ ಇಬ್ಬರೂ ಶ್ರೀಗಳ ಭಕ್ತರು ನಡೆಸಿದ ಸಂಧಾನ ಸಭೆಗಳು ವಿಫಲಗೊಂಡ ಹಿನ್ನೆಲೆಯಲ್ಲಿ, ಸಾಕಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಪೊಲೀಸ್‌ ಅಧಿಕಾರಿಗಳು ಶಾಂತಿ, ಸುವ್ಯವಸ್ಥೆ ಹದಗೆಡುವ ಮುನ್ಸೂಚನೆ ಇದೆ ಎಂದು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಪೊಲೀಸ್ ಅಧಿಕಾರಿಗಳ ಶಿಫಾರಸಿನಂತೆ ಗದಗ ತಹಸೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ನೋಟಿಸ್‌ ನೀಡಿದರು. ಮಾರ್ಚ್‌ 8ರಂದು ರಾತ್ರಿ 8ರಿಂದ ಮಾರ್ಚ್‌ 9ರ ಮಧ್ಯರಾತ್ರಿ 12 ಗಂಟೆವರೆಗೆ ಕಲಂ 144 ಜಾರಿ ಮಾಡಿ, ಆದೇಶಿಸಿದರು. ಇದರಿಂದಾಗಿ ಐತಿಹಾಸಿಕ ಜಾತ್ರಾ ಮಹೋತ್ಸವ ಇದೇ ಮೊದಲಬಾರಿಗೆ ರದ್ದುಗೊಂಡಿತು.ಭಕ್ತರ ಬೇಸರ: ಶಿವಾನಂದ ಮಠದ ಇತಿಹಾಸದಲ್ಲೇ ರಥೋತ್ಸವ ಸ್ಥಗಿತಗೊಂಡಿರಲಿಲ್ಲ, ಹಿರಿಯ ಶ್ರೀಗಳು ದೊಡ್ಡವರಾಗಿ ಅವರು ನಡೆದುಕೊಳ್ಳಬೇಕು, ಕಿರಿಯ ಶ್ರೀಗಳು ಸಣ್ಣವರಾಗಿ ನಡೆದುಕೊಳ್ಳಬೇಕು ಇವರಿಬ್ಬರ ಸಂಘರ್ಷದಿಂದ ಸಾರ್ವಜನಿಕರು ಜಾತ್ರೆಯಿಂದ ವಂಚಿತರಾಗುವಂತಾಗಿದೆ ಎಂದು ಕೊಪ್ಪಳ, ಬಾಗಲಕೋಟೆ, ಹಾವೇರಿ ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ಧ ನೂರಾರು ಸಂಖ್ಯೆಯ ಭಕ್ತರು ಬೇಸರ ವ್ಯಕ್ತ ಪಡಿಸಿದರು.

ಸಪ್ಪೆಯಾಗಿದ್ದ ವ್ಯಾಪಾರ ವಹಿವಾಟು: ಜಾತ್ರಾ ಮಹೋತ್ಸವ ನಡೆಯುತ್ತದೆ ಎಂಬ ಆಶಾಭಾವದಿಂದ ದೂರದ ಊರುಗಳಿಂದೆಲ್ಲಾ ಟ್ರ್ಯಾಕ್ಟರ್‌, ಚಕ್ಕಡಿ ಕಟ್ಟಿಕೊಂಡು ಭಕ್ತರು ಬಂದಿದ್ದರು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಮೂಡದ ಕಾರಣ ಜಾತ್ರೆಯ ಕಳೆಯೇ ಹೊರಟು ಹೋಗಿತ್ತು. ಮಠದ ಆವರಣದ ತುಂಬೆಲ್ಲಾ ಪೊಲೀಸ್ ಅಧಿಕಾರಿಗಳು ಸಾಕಷ್ಟು ಪೊಲೀಸ್ ವಾಹನಗಳು ನಿಲುಗಡೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠದತ್ತ ಬರಲೇ ಇಲ್ಲ. ಇನ್ನು ಗ್ರಾಮೀಣ ಪ್ರದೇಶದಿಂದ ಮತ್ತು ಅಕ್ಕ ಪಕ್ಕದ ಜಿಲ್ಲೆಯ ಭಕ್ತರು ಮಾತ್ರ ಶಿವನಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಮಾಡಿಸಿದರು. ಸಂಜೆ ಆಗುತ್ತಿದ್ದಂತೆ, ಪೊಲೀಸರು ಮಠದ ಆವರಣದ ಒಳಗಿದ್ದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದರು. ಭಕ್ತರನ್ನೂ ಆಚೆಗೆ ಕಳಿಸಿದರು. 144 ಸೆಕ್ಷನ್‌ ಜಾರಿ ಹಿನ್ನೆಲೆಯಲ್ಲಿ ಮಠದ ಆವರಣದ ತುಂಬೆಲ್ಲಾ ಪೊಲೀಸರು ಬೀಡುಬಿಟ್ಟಿದ್ದರು.

ಅಂಗಡಿಗಳೂ ಕಡಿಮೆಯೇ: ಶಿವಾನಂದ ಮಠದ ಗೊಂದಲದ ವಿಷಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾದ ಹಿನ್ನೆಲೆಯಲ್ಲಿ ಪ್ರತಿ ವರ್ಷಕ್ಕಿಂತಲೂ ವ್ಯಾಪಾರಕ್ಕಾಗಿ ಬರುವ ಅಂಗಡಿಗಳ ಸಂಖ್ಯೆಯೂ ಕಡಿಮೆಯೇ ಇತ್ತು. ಜಾತ್ರೆಗೆ ಬರುವ ಮಕ್ಕಳಿಗೆ ತರಹೇವಾರಿ ಆಟಿಕೆಗಳು, ಆಲಂಕಾರಿಕ ವಸ್ತುಗಳನ್ನು ನೋಡುವ ಕೊಳ್ಳುವ ಆಸೆ ಇದ್ದೇ ಇರುತ್ತದೆ. ಆದರೆ ಈ ಬಾರಿ ಮಾತ್ರ ಜಾತ್ರೆಯಲ್ಲಿ ಅದು ಕಂಡು ಬರಲಿಲ್ಲ. ಈ ವಿದ್ಯಮಾನ ಗೊತ್ತಿಲ್ಲದ ಕೆಲವರು ಅಂಗಡಿಗಳನ್ನು ತೆರೆದಿದ್ದರು. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು ಒಂದಷ್ಟು ಹಣವನ್ನೂ ಖರ್ಚು ಮಾಡುತ್ತಿದ್ದರು. ಆದರೆ, ಈ ಬಾರಿ ರಥೋತ್ಸವ ರದ್ದುಗೊಂಡ ಕಾರಣ ಭಕ್ತರ ಸಂಖ್ಯೆಯೂ ಕಡಿಮೆ ಆಗಿತ್ತು. ಕುಟುಂಬ ನಿರ್ವಹಣೆಗಾಗಿ ಜಾತ್ರೆಯಲ್ಲಿ ಒಂದಷ್ಟು ಕಾಸು ಆಗುತ್ತಿತ್ತು. ಈ ವರ್ಷ ಅದೂ ಇಲ್ಲದಂತಾಯಿತು ಎಂದು ಸಣ್ಣ ಅಂಗಡಿಗಳ ವ್ಯಾಪಾರಸ್ಥರು ನೋವು ತೊಡಿಕೊಂಡರು.