ಸಾರಾಂಶ
-ಬಗೆಹರಿಯದ ಸರ್ವರ್ ಸಮಸ್ಯೆ । ಆನ್‌ಲೈನ್ ಸೆಂಟರ್ ಮುಂದೆ ಅರ್ಜಿಗಾಗಿ ಪರದಾಟ
ಅನಿಲ್ ಬಿರಾದರ್ಕನ್ನಡಪ್ರಭ ವಾರ್ತೆ, ಕೊಡೇಕಲ್
ಕಳೆದೊಂದು ವರ್ಷದಿಂದ ಸಮರ್ಪಕ ಪಡಿತರ ಚೀಟಿಗಾಗಿ ಹೊಸ ಅರ್ಜಿ ಸಲ್ಲಿಸಲು ನಿಗದಿತ ಸಮಯವಿರದ ಕಾರಣ ಅರ್ಜಿದಾರರು ಪಡಿತರ ಚೀಟಿ ಮಾಡಿಸಿಕೊಳ್ಳಲು ಹೈರಾಣಾಗಿದ್ದಾರೆ. ಪಡಿತರ ಚೀಟಿಗಾಗಿ ಹೊಸ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ಬುಧವಾರ ಕೊನೆಯ ದಿನವಾಗಿದೆ. ಕೇವಲ ಎರಡೇ ದಿನಗಳಲ್ಲಿ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ.ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲಾವಕಾಶವನ್ನು ಆಹಾರ ಇಲಾಖೆ ನೀಡಿದ್ದರು. ಆದರೆ, ಅದು ಕೂಡ ಎರಡು ಗಂಟೆಗಳ ಅವಧಿ ಮಾತ್ರ. ಆದರೆ, ಜನರು ತಾಸುಗಟ್ಟೆಲೆ ನಿಂತರೂ ಸರ್ವರ್ ಬಾರದ ಕಾರಣ ಅರ್ಜಿದಾರರು ಪರದಾಡುವಂತಾಗಿತ್ತು.
* ಕೇವಲ ಎರಡು ಗಂಟೆ ಮಾತ್ರ ಕಾಲಾವಕಾಶ:ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಮತ್ತು ತಿದ್ದುಪಡಿ ಮಾಡಿಸಲು ಮಂಗಳವಾರ ಆರಂಭಗೊಂಡಿತ್ತು. ಹೊಸ ಕಾರ್ಡ್ ಗೆ ಅರ್ಜಿ ಹಾಕಲು ಬೆ.10 ರಿಂದ ಮಧ್ಯಾಹ್ನ 12 ಗಂಟೆ ಹಾಗೂ ತಿದ್ದುಪಡಿ ಮಾಡಿಸಲು ಮಧ್ಯಾಹ್ನ 4 ರಿಂದ ಸಂಜೆ 6 ಗಂಟೆ ಕೇವಲ ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಅರ್ಜಿದಾರರು ಗ್ರಾಮ ಒನ್ ಕೇಂದ್ರಗಳ ಹಾಗೂ ಖಾಸಗಿ ಆನ್‌ಲೈನ್ ಸೆಂಟರ ಮುಂದೆ ಸುಸ್ತಾಗಿ ನಿಂತಿದ್ದು ಕಂಡು ಬಂದಿತು. ಮಂಗಳವಾರದಿಂದಲೇ ಹೊಸರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಂದಿದ್ದೇನೆ. ಆದರೆ, ಸರ್ವರ್ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು, ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗ್ರಾಮದ ಚನ್ನಬಸವ ಧನ್ನೂರ.
* ಜನ ಜಂಗುಳಿ:ಮಂಗಳವಾರದಿಂದ ಆರಂಭಗೊಂಡಿರುವ ಅರ್ಜಿ ಸಲ್ಲಿಸುವಿಕೆ ಹಾಗೂ ಪಡಿತರ ಚೀಟಿಗೆ ತಿದ್ದುಪಡಿಗಾಗಿ ವಲಯದ ವಿವಿಧ ಗ್ರಾಮಗಳಿಂದ ಜನರು ಗ್ರಾಮ ಒನ್ ಕೇಂದ್ರ ಮತ್ತು ಖಾಸಗಿ ಸೆಂಟರಗಳ ಮುಂದೆ ಅಂಗಡಿ ಬಾಗಿಲು ತೆಗೆಯುವ ಮುಂಚೆ ಜಮಾವಣೆಗೊಂಡು ಸರತಿ ಸಾಲಿನಲ್ಲಿ ನಿಂತುಕೊಂಡು ಕೇಂದ್ರಗಳ ಬಾಗಿಲು ತೆಗೆಯುವ ದಾರಿ ನೋಡುತ್ತಿದ್ದು, ಅಂಗಡಿ ತೆರೆಯುತ್ತಿದ್ದಂತೆ ಏಕಾಏಕಿಯಾಗಿ ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಕಾರಣ ನೂಕು ನುಗ್ಗಲು ಉಂಟಾಗಿತ್ತು. ಆದರೂ ನಿಧಾನ ಗತಿಯಿಂದ ಕೂಡಿದ್ದ ಸರ್ವರ್ ನಿಂದಾಗಿ ಹೊಸ ಅರ್ಜಿ ಸಲ್ಲಿಕೆ ಹಾಗೂ ತಿದ್ದುಪಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಚಿಕ್ಕ ಮಕ್ಕಳೊಂದಿಗೆ ಬಂದಿದ್ದ ಮಹಿಳೆಯರು ಮಕ್ಕಳನ್ನು ಸಮಾಧಾನ ಮಾಡುತ್ತಲೆ ಸರ್ವರ್ ಸಮಸ್ಯೆ ಹಾಗೂ ಅಧಿಕಾರಿಗಳನ್ನು ಶಪಿಸುತ್ತಾ ಮನೆ ಕಡೆಗೆ ತೆರಳಿದರು.
* ಕಾಲಾವಧಿ ಹೆಚ್ಚಿಸುವಂತೆ ಆಗ್ರಹ:ಹೊಸ ಪಡಿತರ ಚೀಟಿ ಮತ್ತು ತಿದ್ದುಪಡಿ ಮಾಡಿಸಲು ಕೇವಲ ಎರಡು ದಿನಗಳ ಮಾತ್ರ ಕಾಲಾವಕಾಶ ನೀಡಲಾಗಿದ್ದು, ಈಗಾಗಲೆ ನೀಡಲಾಗಿದ್ದ ಅವಧಿ ಮುಗಿದು ಹೋಗಿದೆ. ಆದರೆ, ಬೆರಳೆಣಿಕೆಯಷ್ಟು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿರುವ ಕಾರಣ ಅರ್ಜಿ ಸಲ್ಲಿಕೆ ಹಾಗೂ ತಿದ್ದುಪಡಿಗೆ ಇನ್ನೂ ಒಂದು ವಾರದ ಕಾಲ ಅವಧಿ ವಿಸ್ತರಿಸಬೇಕೆಂದು ಜನರು ಆಗ್ರಹಿಸಿದ್ದು, ಈ ಕುರಿತು ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಿದೆ.
-------ಫೋಟೊ: 3ವೈಡಿಆರ್12:
ಹೊಸ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆಗೆ ಅರ್ಜಿ ಸಲ್ಲಿಸಲು ಕೊಡೇಕಲ್ ಸಮೀಪದ ಜೋಗುಂಡಭಾವಿ ಗ್ರಾಮದ ಗ್ರಾಮ ಒನ್ ಕೇಂದ್ರದ ಮುಂದೆ ಜಮಾವಣೆಗೊಂಡಿರುವ ಅರ್ಜಿದಾರರು.-------
ಫೋಟೊ:3ವೈಡಿಆರ್13:ಹೊಸ ರೇಷನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆಗೆ ಅರ್ಜಿ ಸಲ್ಲಿಸಲು ಕೊಡೇಕಲ್ ಸಮೀಪದ ಜೋಗುಂಡಭಾವಿ ಗ್ರಾಮದ ಗ್ರಾಮ ಒನ್ ಕೇಂದ್ರದ ಮುಂದೆ ಜಮಾವಣೆಗೊಂಡಿರುವ ಅರ್ಜಿದಾರರು.
-------