ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ವರ್ ಅಡ್ಡಿ

| Published : Jul 04 2024, 01:06 AM IST

ಸಾರಾಂಶ

ಚಳ್ಳಕೆರೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕರ್ನಾಟಕ ಒನ್ ಕೇಂದ್ರದ ಮುಂದೆ ಮಕ್ಕಳೊಂದಿಗೆ ಪಡಿತರ ಕಾರ್ಡ್‌ಗಾಗಿ ಹಳ್ಳಿಗಳಿಂದ ಬಂದು ಕಾದು ಕುಳಿತ ಮಹಿಳೆಯರು

ಗೃಹಲಕ್ಷ್ಮಿ ಹಣಕ್ಕಿಂತ ಪ್ರತಿನಿತ್ಯ ಊಟ ಮಾಡಲು ಅಕ್ಕಿ, ರಾಗಿ ಸಿಕ್ಕರೆ ಸಾಕು: ಪುಟ್ಟಮ್ಮ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯ ಸರ್ಕಾರ ನೂತನವಾಗಿ ಪಡಿತರ ಚೀಟಿ ಹಾಗೂ ಹೆಸರು ಸೇರ್ಪಡೆಗೆ ಎರಡು ದಿನಗಳ ಕಾಲ ಅವಕಾಶ ನೀಡಿದ್ದು, ನಗರದ ಬಹುತೇಕ ಎಲ್ಲಾ ಕೇಂದ್ರಗಳ ಮುಂದೆ ಜನರು ಸರಥಿ ಸಾಲಿನಲ್ಲಿ ನಿಂತು ದಾಖಲೆ ಸಿದ್ಧವಿದ್ದರೂ ಸಹ ಸರ್ವರ್ ಸಮಸ್ಯೆಯಿಂದ ಎರಡೂ ದಿನಗಳಿಂದ ಯಾವುದೇ ಹೊಸ ಕಾರ್ಡ್ ನೊಂದಾವಣೆ, ಸೇರ್ಪಡೆಯಾಗದೆ ಜನರು ಪರದಾಡಿದರು.

ಕೇವಲ ಚಳ್ಳಕೆರೆ ನಗರವಷ್ಟೇಯಲ್ಲದೆ, ಗ್ರಾಮಾಂತರ ಪ್ರದೇಶದಿಂದಲೂ ಮಹಿಳೆಯರು ಪುಟ್ಟ ಮಕ್ಕಳೊಂದಿಗೆ ಕಂಪ್ಯೂಟರ್ ಕೇಂದ್ರಗಳ ಮುಂದೆ ಮಳೆ, ಗಾಳಿ ಲೆಕ್ಕಿಸದೆ ಬೆಳಗಿನಿಂದ ಸಂಜೆವರೆಗೂ ಕಾದರೂ ಸರ್ವರ್ ಸಮಸ್ಯೆ ಬಗೆಹರಿಯಲಿಲ್ಲ, ಇಡೀ ದಿನ ಮಕ್ಕಳು ಮರಿಯೊಂದಿಗೆ ಕಾದ ಮಹಿಳೆಯರು ಸರ್ಕಾರದ ನಿರ್ಧಾರಕ್ಕೆ ಅಸಮದಾನ ವ್ಯಕ್ತಪಡಿಸಿ ಇಡೀ ಶಾಪ ಹಾಕಿದರು.

ಈ ಬಗ್ಗೆ ನೊಂದ ಮಹಿಳೆ ಪುಟ್ಟಮ್ಮ ಮಾತನಾಡಿ, ರಾಜ್ಯ ಸರ್ಕಾರಕ್ಕೆ ನಿಜವಾದ ಜನಪರ ಕಾಳಜಿ ಇದ್ದರೆ ನೊಂದಾವಣೆ ಮತ್ತು ಮಾರ್ಪಡಿಗೆ ಸಮಯವಕಾಶ ನೀಡಬೇಕು. ಕೇವಲ ಎರಡು ದಿನ ಕಾಲಾವಕಾಶ ಕೊಟ್ಟು ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮನೆ ಕೆಲಸ ಬಿಟ್ಟು ಗ್ರಾಮ ಓನ್‌, ಕರ್ನಾಟಕ ಒನ್‌ ಕೇಂದ್ರಗಳ ಮುಂದೆ ಕಾಯುವ ದುಸ್ಥಿತಿ ಉಂಟಾಗಿದೆ. ಈ ಹಿಂದೆ ಯಾವುದೇ ಸಮಯದಲ್ಲಾದರೂ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರು. ಆದರೆ, ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರದ ಪ್ರತಿ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ರೇಷನ್ ಕಾರ್ಡ್‌ಗೆ ಹೊಸ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆಂದು ಸರ್ವರ್ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಆದರೆ, ನಮಗೆ ಸರ್ಕಾರದ ಗೃಹಲಕ್ಷ್ಮಿ ಹಣಕ್ಕಿಂತ ಪ್ರತಿನಿತ್ಯ ಊಟ ಮಾಡಲು ಅಕ್ಕಿ, ರಾಗಿ ಸಿಕ್ಕರೆ ಸಾಕು ಎಂದು ತಮ್ಮ ಅಳಲು ತೋಡಿಕೊಂಡರು.

ಸರ್ಕಾರದ ದಿಢೀರ್ ನಿರ್ಧಾರಕ್ಕೆ ಸಾರ್ವಜನಿಕವಾಗಿ ವ್ಯಾಪಕ ಅಸಮದಾನ ವ್ಯಕ್ತವಾಗಿದೆ. ಎಲ್ಲಾ ಕೇಂದ್ರಗಳ ಮುಂದೆ ಸರ್ವರ್ ಸಮಸ್ಯೆ ಇದ್ದರೂ ಯಾವುದೇ ಅಧಿಕಾರಿ ಈ ಬಗ್ಗೆ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸದೆ ದೂರ ಉಳಿಯುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕಂಪ್ಯೂಟರ್ ಕೇಂದ್ರಗಳ ನಿರ್ವಾಹಕರು ಮಾತ್ರ ಸರ್ವರ್ ಸರಿ ಇದ್ದರೆ ಕೆಲಸ ಆಗುತ್ತದೆ. ಇಲ್ಲವಾದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಎರಡು ದಿನಗಳಿಂದ ಒಂದು ಅರ್ಜಿಯನ್ನು ಹಾಕಲು ಸಾಧ್ಯವಾಗಿಲ್ಲ ಜನರು ಮಾತ್ರ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತು ನಮಗೆ ಒತ್ತಾಯಿಸುತ್ತಿದ್ದಾರೆ. ಸರ್ವರ್ ಸಮಸ್ಯೆ ಬಗೆಹರಿದಲ್ಲಿ ಮಾತ್ರ ರೇಷನ್ ಕಾರ್ಡ್ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.