ರಟ್ಟೀಹಳ್ಳಿ ಬಿಜೆಪಿ ಭದ್ರಕೋಟೆ ಬಿಜೆಪಿ- ಬಿ.ವೈ. ವಿಜಯೇಂದ್ರ

| Published : Oct 04 2025, 12:00 AM IST

ಸಾರಾಂಶ

ರಟ್ಟೀಹಳ್ಳಿ ನೂತನ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಮುಖಂಡರ ನಿಯೋಗ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ರಟ್ಟೀಹಳ್ಳಿ: ನೂತನ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಮುಖಂಡರ ನಿಯೋಗ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಚುನಾವಣೆ ಪೂರ್ವದಲ್ಲೇ ಕಾಂಗ್ರೆಸ್‍ನವರು ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಮ್ಮದೆ ಎಂದು ಘೋಷಣೆ ಮಾಡಿಕೊಂಡಿದ್ದು ಮೂರ್ಖತನದ ಪರಮಾವಧಿ ಹಿಡಿದ ಕೈಗನ್ನಡಿಯಾಗಿದೆ. ಚುನಾವಣೆ ಪೂರ್ವದಲ್ಲಿ ನಡೆದ ಆಂತರಿಕ ಬೆಳವಣಿಗೆಯಿಂದ ಬೇಸತ್ತು ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾದ ರವೀಂದ್ರ ಮುದಿಯಪ್ಪನವರು ಹಾಗೂ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ, ಈ ಹಿಂದೆ ಇಬ್ಬರು ಬಿಜೆಪಿ ಪಕ್ಷದವರೇ ಸಣ್ಣ ಪುಟ್ಟ ಘಟನೆಗಳಿಂದ ಪಕ್ಷ ತ್ವರಿದು ಹೋಗಿದ್ದರು. ಮತ್ತೆ ಮರಳಿ ಪಕ್ಷ ಸೇರ್ಪಡೆಯಾಗಿರುವುದು ಅತ್ಯಂತ ಸಂತಸವನ್ನುಂಟು ಮಾಡಿದೆ ಎಂದರು.ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿಸಿ ಪಾಟೀಲ್, ಪಾಲಾಕ್ಷಗೌಡ ಪಾಟೀಲ್, ಮಾಲತೇಶಗೌಡ ಗಂಗೋಳ ಸೇರಿದಂತೆ ಅನೇಕ ಮುಖಂಡರ ಪರಿಶ್ರಮದಿಂದಾಗಿ ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣೆ ಹಿಡಿಯಲು ಸಾಧ್ಯವಾಗಿದೆ. ನಿಮ್ಮ ಈ ಗೆಲವು ಇಷ್ಟಕ್ಕೆ ನಿಲ್ಲದೆ, ನಿಮ್ಮ ಮೇಲೆ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಾಗಿದೆ. ಆದ್ದರಿಂದ ಪಟ್ಟಣದಲ್ಲಿ ಉತ್ತಮ ಆಡಳಿತ ನೀಡಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಹಾವೇರಿ ಜಿಲ್ಲೆ ಬಿಜೆಪಿಯ ಭದ್ರ ಕೋಟೆಯಾಗಿತ್ತು. ಕಾರಣಾಂತರಗಳಿಂದ ಅದು ಸಡಿಲಗೊಂಡಿದ್ದು ಹಾವೇರಿ ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿಯ ಗತವೈಭವ ಮರಳಿ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಯಾವುದೇ ಕ್ಷಣದಲ್ಲಾದರೂ ಚುನಾವಣೆ ನಡೆದರೆ ಬಿಜೆಪಿ ಕನಿಷ್ಠ 130ರಿಂದ 140 ಸೀಟ್ ಗೆಲ್ಲಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಜತೆಗೂಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿಮ್ಮೆಲ್ಲರ ಶ್ರಮ ಅತ್ಯಗತ್ಯ ಎಂದರು.

ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ಮಾತನಾಡಿ, ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಾವ ರೀತಿ ಯಶಸ್ವಿಯಾಗಿದ್ದೇವೆ ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆದೆ ಪಡೆಯುತ್ತೇವೆ. ಆ ನಿಟ್ಟಿನಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಬಲ ಪಡಿಸಿ ಶ್ರಮಿಸುತ್ತೇವೆ ಎಂದರು. ಪಪಂ ನೂತನ ಅಧ್ಯಕ್ಷ ರವಿ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸದಸ್ಯರಾದ ರವಿ ಹದಡೇರ, ಬಸವರಾಜ ಆಡಿನವರ, ಬಸವರಾಜ ಕಟ್ಟಿಮನಿ, ಮುಖಂಡರಾದ ಶಂಭಣ್ಣ ಗೂಳಪ್ಪನವರ, ಮಾಲತೇಶಗೌಡ ಗಂಗೋಳ, ಶ್ರೀನಿವಾಸ ಬೈರೋಜಿಯವರ, ವಿನಾಯಕ ಅಗಡಿ, ನಾಗರಾಜ ದ್ಯಾವಕ್ಕಳವರ, ರಮೇಶ, ನಾಗರಾಜ ಉಪ್ಪಾರ ಮುಂತಾದವರು ಇದ್ದರು.