ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟ

| Published : Aug 20 2025, 01:30 AM IST

ಸಾರಾಂಶ

ಇಲ್ಲಿನ ಪಟ್ಟಣ ಪಂಚಾಯಿತಿ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 60 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜಿಟಿ ಜಿಟಿ ಮಳೆಯ ನಡುವೆಯೂ ಶೇ. 80.63ರಷ್ಟು ಮತದಾನವಾಗಿದೆ.

ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಆ. 20ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲಕ್ಕೆ ಬುಧವಾರ ತೆರೆ ಬೀಳಲಿದೆ.

ಇಲ್ಲಿನ ಪಟ್ಟಣ ಪಂಚಾಯಿತಿ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 60 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜಿಟಿ ಜಿಟಿ ಮಳೆಯ ನಡುವೆಯೂ ಶೇ. 80.63ರಷ್ಟು ಮತದಾನವಾಗಿದೆ. ಬಹುತೇಕ ಎಲ್ಲ ವಾರ್ಡುಗಳಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ಪೈಪೋಟಿ ಇದ್ದರೆ, ಮತ್ತೆ ಕೆಲವು ಕಡೆ ಪಕ್ಷೇತರರು ಫೈಟ್‌ ನೀಡಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರಿಂದ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಏರ್ಪಟ್ಟಿದೆ. ಮತಯಂತ್ರದಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ರಾಜಕೀಯ ಹಣೆಬರಹ ಬುಧವಾರ ಬಹಿರಂಗವಾಗಲಿದೆ. ಸೋಲು- ಗೆಲುವಿನ ಲೆಕ್ಕಾಚಾರ: ಕಳೆದ ಒಂದು ತಿಂಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು, ಅವರ ಬೆಂಬಲಿಗರು ಈಗ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಮತದಾನದ ಪ್ರಮಾಣದ ಆಧಾರದಲ್ಲಿ ಯಾರಿಗೆ ಎಷ್ಟು ಮತಗಳು ಬೀಳಬಹುದು, ಅಂದಾಜು ಎಷ್ಟು ಮತಗಳು ಬಿದ್ದರೆ ಗೆಲ್ಲಬಹುದು ಎಂಬ ಚರ್ಚೆ ನಡೆಸಿದ್ದಾರೆ.

ಬಹುತೇಕ ವಾರ್ಡುಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಪಕ್ಷೇತರರು, ಜೆಡಿಎಸ್‌, ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಪಡೆಯುವ ಮತಗಳ ಆಧಾರದಲ್ಲಿ ಮತ್ತೊಂದು ಪಕ್ಷದ ಅಭ್ಯರ್ಥಿಗಳ ಸೋಲು- ಗೆಲುವು ಕೂಡ ನಿರ್ಧಾರವಾಗಲಿದೆ. ಅದಕ್ಕಾಗಿ ಆ. 20ರ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇಡಿ ರಟ್ಟೀಹಳ್ಳಿ ಪಟ್ಟಣದಲ್ಲಿ ಫಲಿತಾಂಶದ್ದೇ ದೊಡ್ಡ ಚರ್ಚೆ ನಡೆದಿದೆ.

ಮತ ಎಣಿಕೆಗೆ ಸಿದ್ಧತೆ

15 ವಾರ್ಡ್‌ನ 15 ಮತಯಂತ್ರಗಳನ್ನು ರಟ್ಟೀಹಳ್ಳಿಯ ತರಳಬಾಳು ಶಾಲೆಯ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಇಲ್ಲಿಯೇ ಆ. 20ರಂದು ಮತ ಎಣಿಕೆಗೆ ಸಿದ್ಧತೆ ನಡೆಸಲಾಗಿದೆ. 11815 ಮತದಾರರ ಪೈಕಿ 4853 ಪುರುಷರು ಹಾಗೂ 4653 ಮಹಿಳೆಯರು ಸೇರಿದಂತೆ 9527 ಜನರು ಮತದಾನ ಮಾಡಿದ್ದಾರೆ.