ನಾಡಿನ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರೂ ಸೇರಿದಂತೆ ಬಸವಾದಿ ಶರಣರ ವ್ಯಕ್ತಿತ್ವಕ್ಕೆ ಚ್ಯುತಿ ಬರುವಂತೆ ಮಾತಾಡಿದ ಲೇಖಕ ರವಿ ಹಂಜ್ ಸೇರಿದಂತೆ ಎಲ್ಲ ತಪ್ಪಿತಸ್ಥರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಕಾನೂನಿನ ಚೌಕಟ್ಟಿನಡಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಬಸವಾದಿ ಶರಣರ ವ್ಯಕ್ತಿತ್ವಕ್ಕೆ ಚ್ಯುತಿ ತಂದವರ ಕ್ಷಮಿಸುವ ಪ್ರಶ್ನೆಯೇ ಇಲ್ಲ: ಎಂ.ಶಿವಕುಮಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾಡಿನ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರೂ ಸೇರಿದಂತೆ ಬಸವಾದಿ ಶರಣರ ವ್ಯಕ್ತಿತ್ವಕ್ಕೆ ಚ್ಯುತಿ ಬರುವಂತೆ ಮಾತಾಡಿದ ಲೇಖಕ ರವಿ ಹಂಜ್ ಸೇರಿದಂತೆ ಎಲ್ಲ ತಪ್ಪಿತಸ್ಥರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಕಾನೂನಿನ ಚೌಕಟ್ಟಿನಡಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿ ಹಂಜ್ ಬರೆದ ಬಸವ ಮಂಟಪ ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶಗಳಿವೆ. ಈ ಕೃತಿಯನ್ನು ಈಗಾಗಲೇ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಮಾಹಿತಿ ಇದ್ದು, ಇಂತಹ ಪುಸ್ತಕ ಬರೆದ ರವಿ ಹಂಜ್ ಹಾಗೂ ವಿವಾದಿತ ಪುಸ್ತಕವನ್ನು ಮುದ್ರಿಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಲೇಖಕ ರವಿ ಹಂಜ್ ಬಂಧನವೂ ಆಗಿದೆ. ಸಂದರ್ಶನವೊಂದರಲ್ಲಿ ರವಿ ಹಂಜ್ ವ್ಯಕ್ತಪಡಿಸಿರುವ ವಿಚಾರಗಳಿಂದ ಬಸವಾನುಯಾಯಿಗಳ ಭಾವನೆಗೆ ತೀವ್ರ ಧಕ್ಕೆಯಾಗಿದೆ. ಶರಣರ ಅಪನಿಂದೆ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ರವಿ ಹಂಜ್‌ ವಿರುದ್ಧ ಯಾವುದೇ ಮುಲಾಜಿಲ್ಲದೇ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಕಳಬೇಡ, ಕೊಲಬೇಡ ಎಂಬ ವಚನಕ್ಕೆ ವಿರುದ್ಧವಾಗಿ ಬಸವಣ್ಣವರು ಬಿಜ್ಜಳ ರಾಜನ ಖಜಾನೆಯನ್ನೇ ಜಂಗಮರ ದಾಸೋಹಕ್ಕೆ ಬಳಸಿದ್ದಾರೆ, ಬಿಜ್ಜಳ ರಾಜನನ್ನು ಕೊಲ್ಲಿಸಿದ್ದಾರೆ ಅಂತೆಲ್ಲಾ ಆರೋಪಿಸಿರುವ ರವಿ ಹಂಜ್ ಅವರಿಗೆ ವಚನ ಸಾಹಿತ್ಯ, ಶಾಸನಗಳ ಅರಿವಿಲ್ಲ. ಸುಮಾರು 16 ಭಾಷೆಗಳಿಗೆ ವಚನ ಸಾಹಿತ್ಯ ಅನುವಾದಗೊಂಡಿದೆ. ಶರಣರ ಭಕ್ತಿ, ಕಾಯಕ, ದಾಸೋಹ ತತ್ವಗಳು ಇಡೀ ವಿಶ್ವಕ್ಕೆ ದಾರಿದೀಪವಾಗಿವೆ. ಸರ್ಕಾರ ಸಮಗ್ರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ರವಿ ಹಂಜ್‌ ಸಂದರ್ಶನ ಪ್ರಸಾರ ಮಾಡಿದ ಸಂಸ್ಥೆಯು ಬಸವ ಅಭಿಮಾನಿಗಳಿಗೆ ಬಹಿರಂಗ ಕ್ಷಮೆ ಕೋರಬೇಕು. ಸಂದರ್ಶನವನ್ನು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗದಂತೆ ತಕ್ಷಣ‍ೇ ತೆಗೆದು ಹಾಕಬೇಕು. ಮುಂದಿನ ದಿನಗಳಲ್ಲಿ ಯಾವುದೇ ಬಸವಾದಿ ಶರಣರ ವಚನಗಳನ್ನು ತಿರುಚದಂತೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಂ.ಶಿವಕುಮಾರ ಎಚ್ಚರಿಸಿದರು.

ಮಹಾಸಭಾ ಮುಖಂಡರಾದ ಈಶ್ವರಪ್ಪ, ಕುಸುಮಾ ಲೋಕೇಶ, ಜಿ.ಎಂ.ಕುಮಾರ, ನಿರ್ಮಲಾ ಶಿವಕುಮಾರ, ವೀಣಾ ಮಂಜುನಾಥ, ಭುವನೇಶ್ವರಿ ತಾಯಿ, ಮಂದಾಕಿನಿ, ಪೂರ್ಣಿಮಾ, ಜಿ.ಎಂ.ಕುಮಾರ, ಸಿದ್ದೇಶ, ವೀರಭದ್ರಪ್ಪ, ರಾಜಶೇಖರಪ್ಪ, ಹಿರೇಮಠ, ಅಮರಕಲಾ ಹಿರೇಮಠ, ಅನ್ನಪೂರ್ಣ ಇತರರು ಇದ್ದರು.

- - -

-21ಕೆಡಿವಿಜಿ2: ದಾವಣಗೆರೆಯಲ್ಲಿ ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.