ಸಾಮಾನ್ಯ ಜನರಲ್ಲಿಯೇ ಎಎಚ್‌ಐವಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಹೇಳಿದರು.
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ
ಸಾಮಾನ್ಯ ಜನರಲ್ಲಿಯೇ ಎಎಚ್‌ಐವಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಹೇಳಿದರು.ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ವೈದ್ಯ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸೋಂಕಿತರಿಗೆ ಅರಿವು ಮೂಡಿಸಬಹುದು. ಆದರೆ ಸಾಮಾನ್ಯರಿಗೆ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಜೀವನಶೈಲಿ ಬದಲಾಗಿದ್ದು ಜಾಗೃತಿ ಇಲ್ಲವೇ ಅರಿವು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹಾಳಾಗಲು ಅಥವಾ ಬದುಕಲು ಅವಕಾಶ ಎಂಬುದು ನಮ್ಮ ಕೈಯಲ್ಲಿಯೇ ಇದೆ. ಅದನ್ನು ಆಯ್ಕೆ ಮಾಡಿಕೊಳ್ಳುವ ವಿವೇಚನೆ ನಮ್ಮಲ್ಲಿ ಇರಬೇಕು ಎಂದು ಎಚ್ಚರಿಸಿದರು. ಹೊಸಬರಿಗೆ ಸೋಂಕು ಹರಡಲು ಹಳೆಯ ಸೋಂಕಿತರೆ ಕಾರಣ. ಪ್ರಸಕ್ತ ಸಾಲಿನಲ್ಲಿ ಭಾರತ ೩ನೇ ಸ್ಥಾನದಲ್ಲಿದ್ದರೆ ಕರ್ನಾಟಕ ೮ನೇ ಸ್ಥಾನದಲ್ಲಿದೆ. ಸೋಂಕು ಹರಡದಂತೆ ನಿಯಂತ್ರಿಸುವಲ್ಲಿ ಹಾಗೂ ಅರಿವು ಮೂಡಿಸುವುದು ಆರೋಗ್ಯ ಇಲಾಖೆಯ ಕೆಲಸವಷ್ಟೆ ಅಲ್ಲದೆ ಸಾರ್ವಜನಿಕರು ಭಾಗವಹಿಸುವಿಕೆ ಮುಖ್ಯವಾಗಲಿದೆ ಎಂದರು. ಆಡಳಿತ ವೈದ್ಯಾಧಿಕಾರಿ ಡಾ. ಯುವರಾಜ್ ಮಾತನಾಡಿ, ಅವಿವಾಹಿತರಲ್ಲಿ ಎಚ್‌ಐವಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅಪಾಯದ ಸಂಗತಿ. ಈ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಅರಿವು ಮೂಡಿಸುವುದು ಹಾಗೂ ಅರಿವು ಪಡೆದುಕೊಳ್ಳುವುದು ಅತಿ ಮುಖ್ಯ. ಅಸುರಕ್ಷಿತ ಲೈಂಗಿಕ ಸಂಪರ್ಕವೇ ಮುಖ್ಯ ಕಾರಣವಾಗಿದ್ದು ಜಾಗೃತಿಗೊಳ್ಳುವ ಮೂಲಕ ಏಡ್ಸ್ ಮುಕ್ತ ದೇಶ ಮಾಡುವುದು ಎಲ್ಲರ ಜವಾಬ್ದಾರಿ ಎಂದರು. ಎಚ್‌ಐವಿ ಅಂಟು ರೋಗವಲ್ಲ. ಆದರೆ ಯುವ ಸಮುದಾಯವು ಎಚ್ಚೆತ್ತುಕೊಳ್ಳದ ಪರಿಣಾಮ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅರಿವು ಮೂಡಿಸಿದರು ಸಹ ಜಾಗೃತಿಗೊಳ್ಳದ ಪರಿಣಾಮವೇ ಸೋಂಕು ಹರಡಲು ಪ್ರಮುಖ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಎಚ್‌ಐವಿ ಎಂಬುದು ನಡವಳಿಕೆಯಿಂದ ಬರುವ ಕಾಯಿಲೆ. ೧೮ ರಿಂದ ೪೦ ವರ್ಷದ ವಯಮಿತಿಯ ಒಳಗಿನ ವ್ಯಕ್ತಿಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಶೇ.೭೦ ರಷ್ಟು ಅವಿವಾಹಿತ ಯುವ ಜನತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪಾಯದ ಮುನ್ಸೂಚನೆ ಎಂದು ತಿಳಿಸಿದರು.ಜಾಗೃತಿ ಜಾಥಾ: ಏಡ್ಸ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ಕೈಗೊಂಡಿದ್ದು ಸರ್ಕಾರಿ ಆಸ್ಪತ್ರೆ ಆವರಣದಿಂದ ಪ್ರಾರಂಭಗೊಂಡು ಆಸ್ಪತ್ರೆ ವೃತ ಮಾರ್ಗವಾಗಿ ಕೆ.ಆರ್.ವೃತ, ನವೋದಯ ವೃತ್ತ, ಮೈಸೂರು ರಸ್ತೆ ಹಾಗೂ ಆಸ್ಪತ್ರೆ ರಸ್ತೆ ಮಾರ್ಗವಾಗಿ ಸಾಗಿತು. ವೈದ್ಯ ನಸಿಂಗ್ ಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ನೋಡಲ್ ಅಧಿಕಾರಿ ಸಂತೋಷ, ತಾಲೂಕು ಆರೋಗ್ಯ ಅಧಿಕಾರಿ ತೇಜಸ್ವಿನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ದಂತ ತಜ್ಞ ಜಮೀರ್ ಅಹ್ಮದ್, ವೈದ್ಯ ನಸಿಂಗ್ ಸ್ಕೂಲ್ ಪ್ರಾಂಶುಪಾಲ ಅರುಣ್, ವೈದ್ಯರಾದ ಡಾ. ಧರಣೇಶ್ ಹಾಗೂ ಇತರರು ಹಾಜರಿದ್ದರು.