ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಿಯೋಜನೆಗೊಳ್ಳುವ ಅಘನಾಶಿನಿ ಏತ ನಿರಾವರಿ ಯೋಜನೆಯು ಜನ ಮತ್ತು ಪರಿಸರ ವಿರೋಧಿ ಯೋಜನೆಯ ಸ್ಥಗಿತಗೊಳಿಸುವ ಹಿನ್ನೆಲೆ ದಾಖಲೆ ಮತ್ತು ಅಂಕಿ-ಸಂಖ್ಯೆಗಳ ಮೂಲಕ ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಲ್. ನಾಗಮೋಹನ್ ದಾಸ್ ಅವರ ಗಮನಕ್ಕೆ ತರಲಾಯಿತು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.ಮಂಗಳವಾರ ಬೆಂಗಳೂರಿನ ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಕಚೇರಿಯಲ್ಲಿ ಅವರನ್ನು ಭೇಟಿಯಾಗಿ ಜನ ವಿರೋಧಿ ನೀತಿಯ ಕುರಿತು ದಾಖಲೆ ಸಹಿತ ವಿರೋಧಿಸಿ ಯೋಜನೆಯ ವಿವರ ನೀಡಿದರು.ಅಘನಾಶಿನಿ ವೇದಾವತಿ ನದಿ ಜೋಡಣೆಯಿಂದ ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನ, ಪ್ರಾಣಿ, ಪಕ್ಷಿಗಳ ಹಾಗೂ ಅತ್ಯಮೂಲ್ಯ ಗಿಡ ಸಸ್ಯಗಳ ಮೇಲೆ ಪರಿಣಾಮ ಬೀಳುವುದರಿಂದ ನೈಸರ್ಗಿಕ ಅಸಮತೋಲನಕ್ಕೆ ಯೋಜನೆಯು ಕಾರಣವಾಗುವುದೆಂಬ ಅಭಿಪ್ರಾಯವನ್ನು ಚರ್ಚೆಯಲ್ಲಿ ಪ್ರಸ್ತಾಪಿಸಿದರು.ಹೋರಾಟಗಾರರ ವೇದಿಕೆಯು ನದಿ ಜೋಡಣೆಗೆ ವಿರೋಧಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ಸುಮಾರು 25 ಸಾವಿರಕ್ಕೂ ಮಿಕ್ಕಿ ಕುಟುಂಬಗಳಿಂದ ಲಿಖಿತ ವಯಕ್ತಿಕ ಆಕ್ಷೇಪಣಾ ಪತ್ರ ಸಲ್ಲಿಸಿರುವುದು ದಾಖಲೆಯ ಕಾರ್ಯ ಎಂಬುದನ್ನು ನದಿಗಳ ರಕ್ಷಣಾ ಆಯೋಗದ ಅದ್ಯಕ್ಷರ ಗಮನಕ್ಕೆ ತರಲಾಯಿತು ಎಂದು ಅವರು ತಿಳಿಸಿದ್ದಾರೆ.ಯುನೆಸ್ಕೋಗೆ ಹೋರಾಟಗಾರರ ವೇದಿಕೆ ಬರೆದಿರುವ ಆಕ್ಷೇಪಣೆಗೆ ಯುನೆಸ್ಕೋ ಸಂಸ್ಥೆಯಿಂದ ಹೋರಾಟಗಾರರ ವೇದಿಕೆ ಲಿಖಿತ ಉತ್ತರ ಪಡೆದಿರುವುದಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಪ್ರಸಂಶೆ ವ್ಯಕ್ತಪಡಿಸಿದರು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.