ರೈತರಿಗೆ ಅನುಕೂಲವಾಗುವಂತೆ ತುರ್ತು ಹಾಲಿನ ಬಿಲ್ ಪಾವತಿ, ಪಾರದರ್ಶಕ ಆಡಳಿತ ನನ್ನ ಆದ್ಯತೆಯಾಗಿದೆ. ಎಲ್ಲರ ಸಹಕಾರದಿಂದ ಬೂಕನಕೆರೆ ಡೈರಿಯನ್ನು ಜಿಲ್ಲೆಯಲ್ಲೇ ಮಾದರಿ ಸಂಘವಾಗಿ ಮಾಡುತ್ತೇನೆ.

ಕೆ.ಆರ್.ಪೇಟೆ:

ತಾಲೂಕಿನ ಬೂಕನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ ರಾಮೇಗೌಡರ ಸಹೋದರ ರವಿರಾಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಶೀಲಾಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ರವಿರಾಮೇಗೌಡ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರ ಮಾರ್ಗದರ್ಶನ ಮೇರೆಗೆ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆಗೆ ಸಹಕಾರ ನೀಡಿದ್ದಾರೆ. ಅದಕ್ಕೆ ಋಣಿಯಾಗಿ ಪ್ರಾಮಾಣಿಕವಾಗಿ ಸಂಘದ ಅಭಿವೃದ್ಧಿಗೆ ಶ್ರಮವಹಿಸುತ್ತನೆ ಎಂದರು.

ರೈತರಿಗೆ ಅನುಕೂಲವಾಗುವಂತೆ ತುರ್ತು ಹಾಲಿನ ಬಿಲ್ ಪಾವತಿ, ಪಾರದರ್ಶಕ ಆಡಳಿತ ನನ್ನ ಆದ್ಯತೆಯಾಗಿದೆ. ಎಲ್ಲರ ಸಹಕಾರದಿಂದ ಬೂಕನಕೆರೆ ಡೈರಿಯನ್ನು ಜಿಲ್ಲೆಯಲ್ಲೇ ಮಾದರಿ ಸಂಘವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ ತಾಪಂ ಮಾಜಿ ಅಧ್ಯಕ್ಷರಾದ ಬಿ.ಜವರಾಯಿಗೌಡ ಮಾತನಾಡಿ, ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ್ದಾರೆ. ಅದರಂತೆ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಇದೇ ವೇಳೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಹಾಲು ಉತ್ಪಾದಕರು ಸನ್ಮಾನಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ, ಟ್ರಾಕ್ಟರ್ ರಂಗೇಗೌಡ, ಮಳ್ಳೇಗೌಡರ ನಾಗೇಗೌಡ, ಡೈರಿ ನಿರ್ದೇಶಕರಾದ ಮಂಜು, ರಾಮಕೃಷ್ಣ, ಗೀತಾ, ಯೋಗನರಸಿಂಹ, ಗೀತಾ, ವಿಶಾಲಾಕ್ಷಮ್ಮ, ಯೋಗ, ದಿನೇಶ್, ಮಂಜುಳಾ, ಸುಮಿತ್ರಾ, ಕೆಡಿಪಿ ಸದಸ್ಯ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.