ಮಕ್ಕಳಲ್ಲಿ ಪೌಷ್ಟಿಕತೆ, ಸಮತೋಲಿತ ಆಹಾರ, ಆರೋಗ್ಯಕರ ಬೆಳೆವಣಿಗೆ ಹಾಗೂ ಅಪೌಷ್ಠಿಕತೆಯ ತಡೆಗಟ್ಟುವಿಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗ ಹಾಗೂ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಮಕ್ಕಳ ಹೊರ ರೋಗಿ ವಿಭಾಗದ ಮುಂಭಾಗದಲ್ಲಿ ಬುಧವಾರ ನಡೆದ ಪೋಷಣ್‌ ಮಾಸಾಚರಣೆ ಕಾರ್ಯಕ್ರಮ

ಮಡಿಕೇರಿ: ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಸಮತೋಲಿತ ಆಹಾರ, ಸ್ವಚ್ಛತೆ ಮತ್ತು ಉತ್ತಮ ಆಹಾರ ಪದ್ಧತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸನತ್ ಕುಮಾರ್ ಸಲಹೆ ನೀಡಿದರು.

ಮಕ್ಕಳಲ್ಲಿ ಪೌಷ್ಟಿಕತೆ, ಸಮತೋಲಿತ ಆಹಾರ, ಆರೋಗ್ಯಕರ ಬೆಳೆವಣಿಗೆ ಹಾಗೂ ಅಪೌಷ್ಠಿಕತೆಯ ತಡೆಗಟ್ಟುವಿಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗ ಹಾಗೂ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಮಕ್ಕಳ ಹೊರ ರೋಗಿ ವಿಭಾಗದ ಮುಂಭಾಗದಲ್ಲಿ ಬುಧವಾರ ನಡೆದ ಪೋಷಣ್‌ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಡಿ.ಆರ್.ಪುರುಷೋತ್ತಮ್ ಮಾತನಾಡಿ, ಮಗುವಿನ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗಾಗಿ ಎರಡು ವರ್ಷಗಳವರೆಗೆ ಎದೆ ಹಾಲುಣಿಸುವುದು ಅವಶ್ಯಕ. (ಎನ್‍ಆರ್‌ಸಿ) ಪೌಷ್ಡಿಕಾಂಶದ ಪುನರ್ವಸತಿ ಕೇಂದ್ರ ವಿಭಾಗದಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆಯೊಂದಿಗೆ, 5 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಸರ್ಕಾರವು ಪ್ರತಿ ತಿಂಗಳು 375 ರು. ವೇತನ ನಷ್ಟ ಪರಿಹಾರವನ್ನು ಒದಗಿಸುತ್ತಿದೆ ಎಂದರು.

ಮಕ್ಕಳ ಹಿರಿಯ ತಜ್ಞ ಡಾ.ರವಿಚಂದ್ರ ಮಾತನಾಡಿ, ಪೌಷ್ಠಿಕ ಆಹಾರ ಆರೋಗ್ಯಕರ ಸಮಾಜದ ಅಡಿಪಾಯವಾಗಿದ್ದು, ಮಕ್ಕಳ ಪೋಷಣೆ ಹಾಗೂ ಪೌಷ್ಠಿಕಾಂಶದ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದರು.

ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಸಲ್ಮ ಶಾಜಿಯಾ ಅವರು ಮಾತನಾಡಿ, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ, ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯುವುದೇ ಅಭಿಯಾನದ ಮುಖ್ಯ ಉದ್ದೇಶ ಎಂದು ಸಲಹೆ ನೀಡಿದರು.

ಮಗುವಿಗೆ 6 ರಿಂದ 8 ತಿಂಗಳ ವಯಸ್ಸಿನಲ್ಲೇ ಅಕ್ಕಿ ಮತ್ತು ರಾಗಿ ಆಧಾರಿತ ಆಹಾರಗಳನ್ನು ನೀಡಲು ಪ್ರಾರಂಭಿಸಬೇಕು, ಮಗುವಿನ ಜೀರ್ಣಕ್ರಿಯೆಗೆ ಅನುಕೂಲವಾಗುವಂತೆ ಈ ಆಹಾರಗಳು ನಯವಾಗಿರಬೇಕು. 8 ತಿಂಗಳ ನಂತರ ನಯವಾದ ಆಹಾರದಿಂದ ಸ್ವಲ್ಪ ಗಟ್ಟಿಯಾದ ಆಹಾರಕ್ಕೆ ಬದಲಾಯಿಸಬಹುದು ಹಾಗೂ ಮೊಟ್ಟೆಯ ಬಿಳಿ ಭಾಗವನ್ನು ನೀಡಬಹುದು. 9 ತಿಂಗಳ ನಂತರ ಮಗುವಿನ ಬೆಳವಣಿಗೆಗಾಗಿ ಮೊಟ್ಟೆಯ ಬಿಳಿ ಮತ್ತು ಹಳದಿ ಭಾಗ ಎರಡನ್ನೂ ನೀಡಬಹುದು. 2 ವರ್ಷದವರೆಗೆ ಕಡ್ಡಾಯವಾಗಿ ಎದೆ ಹಾಲುಣಿಸಬೇಕು. ಹೊರಗಿನ ಆಹಾರಗಳನ್ನು ನೀಡುವುದನ್ನು ನಿಲ್ಲಿಸಿ, ಮನೆಯಲ್ಲಿ ತಯಾರಿಸಿದ ಆಹಾರವನ್ನೇ ನೀಡುವುದು ಅತ್ಯಗತ್ಯ ಎಂದರು.

ಜಿಲ್ಲಾ ಆಸ್ಪತ್ರೆಯ ಮೆಟ್ರೋನ್ ಲಕ್ಷ್ಮೀ ಅವರು ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನವಜಾತ ಶಿಶುವು ಆರೋಗ್ಯವಂತವಾಗಿರಬೇಕು. ಇದಕ್ಕಾಗಿ ಗರ್ಭಿಣಿಯರು ಉತ್ತಮ ಗುಣಮಟ್ಟದ ಆಹಾರ ಮತ್ತು ಪೌಷ್ಟಿಕಾಂಶಯುಕ್ತ ಪದಾರ್ಥ ಸೇವಿಸಬೇಕು ಎಂದರು.

ಜಿಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ಅವರು ಮಾತನಾಡಿ, ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು 6 ತಿಂಗಳವರೆಗೆ ತಪ್ಪದೇ ಕ್ರಮಬದ್ಧವಾಗಿ ಎದೆ ಹಾಲುಣಿಸಬೇಕು. ಇದು ತಾಯಿ ಮತ್ತು ಮಗುವಿನಲ್ಲಿ ರಕ್ತಹೀನತೆ ಹಾಗೂ ಅಪೌಷ್ಟಿಕತೆ ತಡೆಯಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೇಘಶ್ರೀ, ಮೇಲ್ವಿಚಾರಕರಾದ ಪ್ರಫುಲ್ ಮೆಂಡನ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ತಾಯಂದಿರು, ಗರ್ಭಿಣಿಯರು ಮತ್ತು ಇತರರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ನಿರೂಪಿಸಿ, ಸ್ವಾಗತಿಸಿ ಮತ್ತು ವಂದಿಸಿದರು.