ಸಾರಾಂಶ
ಉದ್ದೇಶಿತ ರಸ್ತೆ ಕಾಮಗಾರಿ ಚತುಷ್ಪಥ ರಸ್ತೆಯದ್ದಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ 38.5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಿದೆ. ಎಚ್. ಕ್ರಾಸ್ ನಲ್ಲಿ ಆಗುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ರಸ್ತೆಗೆ ಮರು ಡಾಂಬರೀಕರಣ ಮಾಡಲು 38.5 ಕೋಟಿ ರು.ಮಂಜೂರಾಗಿದ್ದು, ಈ ರಸ್ತೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಯಾಗಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. ಶುಕ್ರವಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೆಚ್. ಕ್ರಾಸ್ ಬಳಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿರ್ಮಾಣ ಮಾಡಲಿರುವ 38.5 ಕೋಟಿ ರು. ವೆಚ್ಚದ ಹೊಸಕೋಟೆ- ಚಿಂತಾಮಣಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ವೀಕ್ಷಿಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.₹38.5 ಕೋಟಿ ವೆಚ್ಚದ ಯೋಜನೆ
ಉದ್ದೇಶಿತ ರಸ್ತೆ ಕಾಮಗಾರಿ ಚತುಷ್ಪಥ ರಸ್ತೆಯದ್ದಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ 38.5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಿದೆ. ಹೆಚ್. ಕ್ರಾಸ್ ಮಾರ್ಗವಾಗಿ ಈ ರಸ್ತೆ ಸಾಗಲಿದ್ದು, ಜಂಕ್ಷನ್ ಆಗಿರುವ ಹೆಚ್. ಕ್ರಾಸ್ ನಲ್ಲಿ ಆಗುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈ ರಸ್ತೆಯ ಹಲವೆಡೆಗಳಲ್ಲಿನ ಏರುಪೇರುಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಅದನ್ನೂ ಸರಿಪಡಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದರು.ಜೊತೆಗೆ ಸುಂಕ ವಸೂಲಿ (ಟೋಲ್ ಗೇಟ್) ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಕಾಮಗಾರಿ ಕೈಗೊಳ್ಳಲು ವಿನ್ಯಾಸ, ನೀಲನಕ್ಷೆಯನ್ನು ಯೋಜಿತ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಈ ಉದ್ದೇಶಿತ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಲೋಕೋಪಯೋಗಿ ಇಲಾಖೆ ಸಚಿವರಿಗೆ ಪತ್ರ ಸಹ ಬರೆಯಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕರಿಂದ ಮಾಹಿತಿ ಸಂಗ್ರಹ
ಚಿವರು ಅಧಿಕಾರಿಗಳ ಸಮ್ಮುಖದಲ್ಲಿ ಎಚ್. ಕ್ರಾಸ್‌ನಿಂದ ಕೈವಾರ ಕ್ರಾಸ್ ವರೆಗೂ ರಸ್ತೆಯುದ್ದಕ್ಕೂ ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯಪಾಲಕ ಅಭಿಯಂತರ ವಸಂತ್, ಶಿಡ್ಲಘಟ್ಟ ತಹಸೀಲ್ದಾರ್ ಎಂ. ಎನ್ ಸ್ವಾಮಿ ಗೌಡ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.