ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕೃತಕ ಬುದ್ಧಿಮತ್ತೆ(ಎಐ) ಮತ್ತು ಮೆಷಿನ್ ಲರ್ನಿಂಗ್ ಮಾಡೆಲ್‌ಗಳಿಂದ ದೊರೆಯುವ ಫಲಿತಾಂಶವನ್ನು ಮನುಷ್ಯರ ಬುದ್ಧಿಶಕ್ತಿ ಬಳಸಿ ಪರಿಶೀಲಿಸಬೇಕಾದ ಅಗತ್ಯತೆ ಇದೆ ಎಂದು ಕ್ಯಾಪ್‌ಜೆಮಿನಿ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಮೌನೇಶ್ ಕೆ ಅವರು ತಿಳಿಸಿದರು.ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಮತ್ತು ದತ್ತಾಂಶ ಸಂವಹನ ಕುರಿತ ಎರಡು ದಿನಗಳ ಐಇಇಇ (ಇನ್ಸ್‌ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್) ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಮಾಡೆಲ್‌ಗಳಲ್ಲಿ ಪೂರ್ವಾಗ್ರಹ ಅಂತರ್ಗತವಾಗಿರುವುದರಿಂದ ಅವು ನೀಡುವ ಫಲಿತಾಂಶವನ್ನು ಯಥಾವತ್ತಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆ ಮಾಡೆಲ್‌ಗಳ ಕಾರ್ಯಕ್ಷಮತೆ ಅವುಗಳಿಗೆ ಉಣಬಡಿಸುವ ದತ್ತಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಇಂದು ಜಗತ್ತನ್ನು ಆಳುತ್ತಿರುವುದು ದತ್ತಾಂಶ. ನಾವು ಬಳಸುತ್ತಿರುವ ಸಾಮಾಜಿಕ ತಾಣಗಳು ಸಹ ದತ್ತಾಂಶದ ಮೇಲೆ ಅವಲಂಬಿತವಾಗಿವೆ ಎಂದು ವಿವರಿಸಿದರು.ವಿಚಾರ ಸಂಕಿರಣದ ಪ್ರಧಾನ ಸಂಯೋಜಕರಾದ ಡಾ. ಗೀತಾ ಕಿರಣ್ ಮಾತನಾಡಿ, ಈ ವಿಚಾರ ಸಂಕಿರಣದಲ್ಲಿ ಮಂಡಿಸುವ ಸಲುವಾಗಿ ಜಗತ್ತಿನ ವಿವಿಧೆಡೆಗಳಿಂದ ೨೩೯೬ ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ೪೨೩ ಪ್ರಬಂಧಗಳನ್ನು ಮಾತ್ರ ಪ್ರಕಟಣೆಗೆ ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ಥಾಯ್ಲೆಂಡ್‌ನ ಕಿಂಗ್ ಮಾಂಗ್‌ಕುಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಾಚರ ರುವಾಂಗ್‌ಸಂಗ್ ಅವರು ವೈದಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ವಿಷಯದ ಕುರಿತು ಉಪನ್ಯಾಸ ನೀಡಿದರು. ವಿಚಾರ ಸಂಕಿರಣದಲ್ಲಿ ಮಂಡನೆಯಾಗಲಿರುವ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ, ಕಾರ್ಯದರ್ಶಿ ಸಿ.ಆರ್. ಜಗದೀಶ್, ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ, ಪ್ರಾಧ್ಯಾಪಕ ಡಾ.ಪಿ.ಸಿ.ಶ್ರೀಕಾಂತ್ ಹಾಗೂ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ವಿವಿಧೆಡೆಗಳಿಂದ ಆಗಮಿಸಿದ್ದ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.