ರೈಲ್ವೆ ಯೋಜನೆ ಮರು ಜಾರಿಗೆ ಕ್ರಮ: ಡಾ.ಮಂಜುನಾಥ್

| Published : Jun 21 2024, 01:04 AM IST

ಸಾರಾಂಶ

ಕನಕಪುರ: ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸತ್ಯಮಂಗಲಕ್ಕೆ ಸಂಪರ್ಕ ಸಾಧಿಸುವ ರೈಲ್ವೆ ಯೋಜನೆ ಜಾರಿಗೆ ತರಲು ಕೇಂದ್ರ ರೈಲ್ವೆ ಸಚಿವರ ಜೊತೆಗೆಎಚ್ಡಿಕೆ ಮಾತುಕತೆ ನಡೆಸಿದ್ದು ನಾನು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.

ಕನಕಪುರ: ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸತ್ಯಮಂಗಲಕ್ಕೆ ಸಂಪರ್ಕ ಸಾಧಿಸುವ ರೈಲ್ವೆ ಯೋಜನೆ ಜಾರಿಗೆ ತರಲು ಕೇಂದ್ರ ರೈಲ್ವೆ ಸಚಿವರ ಜೊತೆಗೆಎಚ್ಡಿಕೆ ಮಾತುಕತೆ ನಡೆಸಿದ್ದು ನಾನು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.

ಎನ್‌ಡಿಎ ಮುಖಂಡರು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಮೆರವಣಿಗೆಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಬೆಂಗಳೂರಿನಿಂದ ಕನಕಪುರ, ಮಳವಳ್ಳಿ ಮಾರ್ಗವಾಗಿ ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೆ ಯೋಜನೆ ಮಂಜೂರು ಮಾಡಿದ್ದರು. ಆದರೆ ಅದು ಇದುವರೆಗೂ ಜಾರಿಗೆ ಬರದೆ 28 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮತ್ತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಜೊತೆ ಚರ್ಚೆ ಮಾಡಿ ಸುಮಾರು 16 ಸಾವಿರ ಕೋಟಿ ವೆಚ್ಚದಲ್ಲಿ ಈ ರೈಲ್ವೆ ಯೋಜನೆಯನ್ನು ಜಾರಿಗೊಳಿಸಲು ಮನವಿ ಮಾಡಿದ್ದು ನಾನು ಕೇಂದ್ರ ಸಚಿವರಿಗೆ ಮನವಿ ಮಾಡಿ ಅತಿ ಶೀಘ್ರವಾಗಿ ಈ ಯೋಜನೆ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹೃದಯ ಸಂಬಂಧಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಕೊಡಬೇಕು. ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು ಇದರ ಕಡೆಗೆ ಗಮನ ಹರಿಸಿ ಬಗೆಹರಿಸಲಾಗುವುದು, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ರಾಜ್ಯ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕನಕಪುರ, ಚನ್ನಪಟ್ಟಣ ಮತ್ತು ರಾಮನಗರ ಸೇರಿದಂತೆ 45 ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತವಾದ ರೋಗಿಗಳಿಗೆ ತುರ್ತು ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿದ್ದೇವೆ ಎಂದರು.

ಸಮಾಜದಲ್ಲಿ ಯಾರೂ ಯಾರ ಮೇಲೂ ದ್ವೇಷ ಬೆಳೆಸಿಕೊಳ್ಳಬಾರದು. ಸಹಬಾಳ್ವೆ ಹಾಗೂ ನೆಮ್ಮದಿಯ ಜೀವನದ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ. ಚುನಾವಣೆ ನಂತರ ಸ್ನೇಹಿತರಂತೆ ಇರಬೇಕು. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನುಸೂಯ ಮಂಜುನಾಥ್‌, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಚಿನ್ನಸ್ವಾಮಿ, ಮುಖಂಡ ಪುಟ್ಟರಾಜು, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ರೈತ ಮೋರ್ಚಾ ಪ್ರ ಕಾರ್ಯದರ್ಶಿ ನಾಗನಂದ,

ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಮುತ್ತು, ಯುವ ಮೋರ್ಚಾ ಅಧ್ಯಕ್ಷ ಸುನೀಲ್, ರಾಮಕೃಷ್ಣ, ಶೇಖರ್, ಜೆಡಿಎಸ್ ಮುಖಂಡ ರಾಜೇಶ್, ಕಬ್ಬಾಳೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 03:

ಕನಕಪುರ ಚನ್ನಬಸಪ್ಪ ವೃತ್ತದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಸಂಸದ ಡಾ. ಮಂಜುನಾಥ್ ಮಾತನಾಡಿದರು. ಅನುಸೂಯ ಮಂಜುನಾಥ್‌, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಚಿನ್ನಸ್ವಾಮಿ, ಮುಖಂಡ ಪುಟ್ಟರಾಜು, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಇತರರಿದ್ದರು.