ನಾನು ಆಯ್ಕೆಯಾದರೆ ಪಿಂಚಣಿ ಮರು ಜಾರಿಗೆ ಕ್ರಮ: ಹ.ರಾ.ಮಹೇಶ್

| Published : May 31 2024, 02:16 AM IST

ನಾನು ಆಯ್ಕೆಯಾದರೆ ಪಿಂಚಣಿ ಮರು ಜಾರಿಗೆ ಕ್ರಮ: ಹ.ರಾ.ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ಅವರು 4 ಬಾರಿ ಆಯ್ಕೆಯಾಗಿದ್ದರೂ ಪ್ರಥಮ ದರ್ಜೆ ಹಾಗೂ ವಿಶ್ವ ವಿದ್ಯಾಲಯಗಳ ಕಾಲೇಜುಗಳ ಅಧ್ಯಾಪಕರ ಕಾಯಂಗಾಗಿ ಹೋರಾಟ ನಡೆಸಿಲ್ಲ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ಅವರು 4 ಬಾರಿ ಆಯ್ಕೆಯಾಗಿದ್ದರೂ ಪ್ರಥಮ ದರ್ಜೆ ಹಾಗೂ ವಿಶ್ವ ವಿದ್ಯಾಲಯಗಳ ಕಾಲೇಜುಗಳ ಅಧ್ಯಾಪಕರ ಕಾಯಂಗಾಗಿ ಹೋರಾಟ ನಡೆಸಿಲ್ಲ. ಈಗ ಮತ್ತೆ ಅಭ್ಯರ್ಥಿಯಾಗಿರುವ ಮರಿತಿಬ್ಬೇಗೌಡರು ಇದಕ್ಕೆ ಉತ್ತರಿಸಬೇಕು ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಹಾಗೂ ಜಿಲ್ಲಾ ಉಸ್ತುವಾರಿ ಎಂ. ಕೃಷ್ಣಮೂರ್ತಿ ಆಗ್ರಹಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಮರಿತಿಬ್ಬೇಗೌಡರು ಉಪನ್ಯಾಸಕರ ಕಾಯಂಗಾಗಿ ಹೋರಾಟ ಮಾಡಲಿಲ್ಲ. ಇಂತಹವರನ್ನು ಮತ್ತೊಮ್ಮೆ ಆಯ್ಕೆ ಮಾಡುವುದು ಸರಿಯೇ ? ಶಿಕ್ಷಕ ಮತದಾರರು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.ಕಾಲೇಜುಗಳಲ್ಲಿ ಪಾಠ ಮಾಡುವ ಅತಿಥಿ ಶಿಕ್ಷಕರು, ಉಪನ್ಯಾಸಕರು, ಅಧ್ಯಾಪಕರಿಗೆ ಉದ್ಯೋಗ ಭದ್ರತೆಯಿಲ್ಲ. ಅತಿಥಿ ಶಿಕ್ಷಕರು ಎಲ್ಲವನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಗಿದೆ. ಹೀಗಾಗಿ ಅಧ್ಯಾಪಕರು ಕೆಲಸ ಮಾಡದವರನ್ನು ಆಯ್ಕೆ ಮಾಡಬಾರದು ಎಂದು ಮನವಿ ಮಾಡಿದರು. ಅನುದಾನ ರಹಿತ ಕನ್ನಡ ಶಾಲೆಗಳು 30 ವರ್ಷಗಳಿಂದ ಅನುದಾನಕ್ಕಾಗಿ ಅಂಗಲಾಚುತ್ತಿದ್ದಾರೆ. ಇವರತ್ತ ತಿರುಗಿಯೂ ನೋಡುತ್ತಿಲ್ಲ. ರಾಜ್ಯದಲ್ಲಿ 1.40 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇನ್ನೂ ಭರ್ತಿ ಮಾಡಿಲ್ಲ. ಇದು ಶಿಕ್ಷಕರಿಗೆ ಮಾಡುತ್ತಿರುವ ಅವಮಾನ. ಅನುದಾನಿತ ಶಾಲೆ, ಕಾಲೇಜುಗಳ ಉಪನ್ಯಾಸಕರ, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರ ಶೈಕ್ಷಣಿಕ ಅರ್ಹತೆ ಗಮನಿಸಿದರೆ ಅಯ್ಯೋ ಎನಿಸುತ್ತದೆ. ಅವರೊಬ್ಬ ರಿಯಲ್ ಎಸ್ಟೇಟ್ ಉದ್ಯಮಿ. ಶಿಕ್ಷಕರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ- ಜೆಡಿಎಸ್‌ನವರಿಗೆ ಪದವೀಧರ ಅಭ್ಯರ್ಥಿಯೊಬ್ಬರು ಸಿಗಲಿಲ್ಲವೇ ಎಂದು ಪ್ರಶ್ನಿಸಿದರು. ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಹ.ರಾ.ಮಹೇಶ್ ಸ್ನಾತಕೋತ್ತರ ಪದವೀಧರರು ಹಾಗೂ ಹೋರಾಟಗಾರರು. ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗಿಂತ ಭಿನ್ನರು. ಆದ್ದರಿಂದ ಶಿಕ್ಷಕ ಮತದಾರರು ಹ.ರಾ.ಮಹೇಶ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಎಸ್ಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹ.ರಾ.ಮಹೇಶ್ ಮಾತನಾಡಿ, ತಾವು ಆಯ್ಕೆಯಾದರೆ ಅತಿಥಿ ಶಿಕ್ಷಕರು ಎಂಬ ಹಣೆಪಟ್ಟಿ ತೆಗೆದು ಉದ್ಯೋಗ ಭದ್ರತೆ ನೀಡಿ ಕಾಯಂಗೊಳಿಸಲಾಗುವುದು. ಹಳೆಯ ಪಿಂಚಣಿ ಮರು ಜಾರಿಗೆ ಕ್ರಮ ವಹಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಬ.ಮ.ಕೃಷ್ಣಮೂರ್ತಿ, ಅಮಚವಾಡಿ ಪ್ರಕಾಶ್, ರಾಜೇಂದ್ರ, ರಾಜಶೇಖರ್ ಹಾಜರಿದ್ದರು.