ಕೆರೆ ತುಂಬುವ ಯೋಜನೆಯ ಕೊಳವೆಗಳನ್ನೇ ತುಂಡರಿಸಿ ಬೇಕಾಬಿಟ್ಟಿತನ ತೋರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಎನ್‌ಎನ್‌ಎಲ್, ಚೆನ್ನೈ ಸೂರತ್ ಹೆದ್ದಾರಿ ನಿರ್ಮಾಣದ ಗುತ್ತಿಗೆದಾರರಿಗೆ ರೈತರ ಆಹೋರಾತ್ರಿ ಧರಣಿಯ ಬಿಸಿ ತಟ್ಟಿದೆ.
ಶೇಷಮೂರ್ತಿ ಅವಧಾನಿ
ಅರ್ಜುಣಗಿ (ಕಲಬುರಗಿ ಜಿಲ್ಲೆ)ಕೆರೆ ತುಂಬುವ ಯೋಜನೆಯ ಕೊಳವೆಗಳನ್ನೇ ತುಂಡರಿಸಿ ಬೇಕಾಬಿಟ್ಟಿತನ ತೋರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಎನ್‌ಎನ್‌ಎಲ್, ಚೆನ್ನೈ ಸೂರತ್ ಹೆದ್ದಾರಿ ನಿರ್ಮಾಣದ ಗುತ್ತಿಗೆದಾರರಿಗೆ ರೈತರ ಆಹೋರಾತ್ರಿ ಧರಣಿಯ ಬಿಸಿ ತಟ್ಟಿದೆ.
ಕಳೆದ 6 ದಿನದಿಂದ ಹೆದ್ದಾರಿಯ 19. 66 ಕಿಮೀನಲ್ಲಿ ಅರ್ಣುಣಗಿ ಬಳಿ ಆರಂಭವಾಗಿರುವ ರೈತರ ಹೋರಾಟದಿಂದ ಪರೇಶಾನ್ ಆಗಿರುವ ಪ್ರಾಧಿಕಾರ, ಕೆಎನ್‌ಎನ್‌ಎಲ್ ಅಧಿಕಾರಿಗಳು ಕಳೆದ 2 ದಿನದಿಂದ ತುಂಡಾಗಿ ಬಿದ್ದಿರುವ 7 ಕೊಳವೆಗಳ ಮರುಜೋಡಣೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಕೊಳವೆ ತುಂಡಾಗಿ 9 ತಿಂಗಳಾದರೂ ಕ್ಯಾರೆ ಎನ್ನದ ಅಧಿಕಾರಿಗಳು ಇದೀಗ ಕೊಳವೆಗಳ ಮರು ಜೋಡಣೆ ಕಾಮಗಾರಿ ಶುರುಮಾಡಿ ಸೆ. 10 ರೊಳಗೆ ಮುಗಿಸೋದಾಗಿ ನೀಡುತ್ತಿರುವ ಹೇಳಿಕೆಯಿಂದ ರೈತರಲ್ಲಿ ವಿಶ್ವಾಸ ಮೂಡಿದೆ. ಚೆನ್ನೈ- ಸೂರತ್ ಹೆದ್ದಾರಿ ಯೋಜನೆಯ ಕಾಮಗಾರಿಗಾಗಿ ಅಫಜಲಪುರ ತಾಲೂಕಿನ 10 ಕೆರೆಗಳು, ಆಳಂದ ತಾಲೂಕಿನ 3 ಕೆರೆಗಳು ಹಾಗೂ ಒಂದು ಬ್ಯಾರೇಜ್‌ಗೆ ನೀರು ತುಂಬಿಸುವ ₹318 ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆಯ ಪೈಪ್‌ಲೈನ್ ಕಿತ್ತು ಹಾಕಲಾಗಿತ್ತು.
ಇದು ಗೊತ್ತಾಗಿ ರೈತರೆಲ್ಲರೂ ಸೇರಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ನೇತೃತ್ವದಲ್ಲಿ ಆ. 27ರಿಂದ ಧರಣಿ ಆರಂಭಿಸಿದ್ದು, ದಿನಕಳೆದಂತೆ ಕಾವೇರುತ್ತಿದೆ. ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸ್ವಾಮೀಜಿಗಳು, ಶಾಸಕರು ಭೇಟಿ ನೀಡುತ್ತಿದ್ದಾರೆ.ವಿಷಯ ಅರಿತು ಹೆದ್ದಾರಿ ಪ್ರಾಧಿಕಾರ ಹಾಗೂ ನೀರಾವರಿ ನಿಗಮದವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಭಾನುವಾರದಿಂದಲೇ ಕಾಮಗಾರಿಗೆ ಚಾಲನೆ ನೀಡಲಾಗಿರೋದು ಸ್ಥಳಕ್ಕೆ ಭೇಟಿ ನೀಡಿದ್ದ ಕನ್ನಡಪ್ರಭ ಗಮನಕ್ಕೆ ಬಂದಿದೆ.
ಮಳೆ ಬಾರದೆ ಭೀಕರ ಬರಗಾಲ ಎದುರಾಗಿರುವ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಜನರೊಂದಿಗೆ ಚೆಲ್ಲಾಟ ಆಡಿದಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರರ ನಿಷ್ಕಾಳಜಿಯಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಆತಂಕವಿದೆ. ಆರ್.ಕೆ. ಪಾಟೀಲ್ ಜನರ ಪರವಾಗಿ ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ.ನಾವು ಅವರೊಂದಿಗೆ ಇದ್ದೇವೆ ಎಂದು ಬಂದವರೆಲ್ಲರೂ ಆರ್‌ಕೆ ಪಾಟೀಲ್ ಮತ್ತು ತಂಡಕ್ಕೆ ಹುರಿದುಂಬಿಸುತ್ತಿರೋದರಿಂದ ಪರಿಸ್ಥಿತಿ ಕಾವೇರುವ ಮೊದಲೇ ಕಾಮಗಾರಿ ಮಾಡಿ ಮುಗಿಸಲು ಪ್ರಾಧಿಕಾರ ಸಜ್ಜಾಗಿ ಕಾರ್ಯಪ್ರವೃತ್ತವಾಗದೆ.
----ಕೊಳವೆಗಳ ಮರು ಜೋಡಣೆ ಸಾಗಿದೆ. ಸೆಪ್ಟೆಂಬರ್ 10ರೊಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಕೆರೆ ಯೋಜನೆಯ ಟ್ರಯಲ್‌ಗೆ ಅನುಕೂಲ ಮಾಡಿಕೊಡಲಾಗುವುದು. ಈ ಸಂಬಂಧ ಗುತ್ತಿಗೆದಾರರಿಗೂ ಮಾತನಾಡಿದ್ದು, ಸೂಚನೆ ನೀಡಲಾಗಿದೆ.
ನವೀನ್, ಎನ್‌ಎಚ್‌ಎಐ ಅಧಿಕಾರಿ, ಕಲಬುರಗಿ---
ಈಗಾಗಲೇ ಕೊಳವೆಗಳು ತುಂಡಾಗಿರೋದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಕ್ರಮ ಕೈಗೊಂಡು ಕೆರೆ ತುಂಬುವ ಯೋಜನೆಯ ನೀರೆತ್ತುವ ಪ್ರಯೋಗ ಕೈಗೊಳ್ಳುತ್ತೇವೆ.ಶಿವಕುಮಾರ್, ಎಇಇ, ಕೆಎನ್‌ಎನ್‌ಎಲ್. ಕಲಬುರಗಿ
---ಸೆ.10ರೊಳಗೆ ಕೆಲಸ ಮುಗಿಯದಿದ್ದರೆ ಏನು ಮಾಡಬೇಕು?, ನಿಮಗೆಲ್ಲ ಗಿಡಕ್ಕೆ ಕಟ್ಟಿ ಬಾರುಕೋಲಿನಿಂದ ಬಾರಿಸಬೇಕಾ?, ನನಗೆ ಸಾಮ, ಭೇದ, ದಂಡ ಎಲ್ಲವೂ ಗೊತ್ತಿದೆ. ಯಾವ ಸಂದರ್ಭದಲ್ಲಿ ಏನು ಬಳಸಬೇಕು ಎಂಬುದೂ ಗೊತ್ತಿದೆ. ಜನರು ರೊಚ್ಚಿಗೆಳುವ ಮುನ್ನ ಕೆಲಸ ಮುಗಿಸಿ
ಬಿಆರ್ ಪಾಟೀಲ್, ಶಾಸಕರು, ಆಳಂದ-------
ನಮ್ಮ ಗಮನಕ್ಕೂ, ಸಂಬಂಧಪಟ್ಟ ಇಲಾಖೆಯ ಗಮನಕ್ಕೂ ಬಾರದೆ ಪೈಪ್‌ಲೈನ್ ಕತ್ತರಿಸಿರುವುದೇ ಈ ಹೋರಾಟಕ್ಕೆ ಪ್ರಮುಖ ಕಾರಣ. ಹೆದ್ದಾರಿ ಪ್ರಾಧಿಕಾರದವರು ತಕ್ಷಣ ಕ್ರಮ ಕೈಗೊಂಡು ಪೈಪ್‌ಲೈನ್ ಕಾಮಗಾರಿಯನ್ನು ತಾವು ನೀಡಿದ ಗಡುವಿನೊಳಗೆ ಪೂರ್ಣಗೊಳಿಸಬೇಕು. ಎರಡು ತಾಲೂಕಿನ ರೈತರಿಗೆ ಅನುಕೂಲವಾಗುವ ₹318 ಕೋಟಿ ವೆಚ್ಚದ ಈ ಯೋಜನೆಯನ್ನು ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಪ್ರಯತ್ನ ಮಾಡಿ ತಂದಿದ್ದಾರೆ. ಅವರ ಪ್ರಯತ್ನಕ್ಕೆ ನಾನೂ ಕೈಜೋಡಿಸಿದ್ದೇನೆ.ಎಂವೈ ಪಾಟೀಲ್, ಶಾಸಕರು, ಅಫಜಲ್ಪುರ
------ಮೊದಲೇ 7 ವರ್ಷದ ವಿಳಂಬ ಕಾಮಗಾರಿ ಮುಕ್ತಾಯ ಹಂತದಲ್ಲಿತ್ತು. ಭೀಮೆಯಲ್ಲಿ ನೀರು ಬಂತು. ಟ್ರಯಲ್ ರನ್ ಮಾಡೋಣ ಎಂದು ನೋಡಿದರೆ ಕೊಳವೆಗಳು ತುಂಡಾಗಿರೋದು ಗಮನಕ್ಕೆ ಬಂದು ಧರಣಿ ಶುರು ಮಾಡಿದ್ದೇವೆ. ಅದೇನೇ ಆಗಲಿ, ನೀರು ಹರಿಯುವವರೆಗೂ ನಾವು ಇಲ್ಲಿಂದ ಕದಲೋದಿಲ್ಲ.
ಆರ್. ಕೆ ಪಾಟೀಲ್, ಹೋರಾಟಗಾರರು