ನೋಟರಿಗಳು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು: ನ್ಯಾ. ಚಂದ್ರಶೇಖರಯ್ಯ

| Published : Mar 25 2024, 12:52 AM IST

ಸಾರಾಂಶ

ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದೆ. ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದ್ದು, ಸಾಹಿತಿಯ ಮನಸ್ಸಿನಿದಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ನೋಟರಿಗಳು ಹೆಚ್ಚೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಸಲಹೆ ನೀಡಿದರು.

ಮೈಸೂರು ವಕೀಲರ ಸಂಘದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ನೋಟರಿಗಳ ಸಂಘವು ಆಯೋಜಿಸಿದ್ದ ಕಾರ್ಯಾಗಾರ ಹಾಗೂ ನೋಟರಿ ಬಿ.ಎಸ್. ಪ್ರಶಾಂತ್ ಅವರು ಕನ್ನಡಕ್ಕೆ ಅನುವಾದಿಸಿರುವ ನೋಟರಿ ಕಾನೂನು ಪದ್ಧತಿ ಹಾಗೂ ಪ್ರಕ್ರಿಯೆ ಎಂಬ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದೆ. ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದ್ದು, ಸಾಹಿತಿಯ ಮನಸ್ಸಿನಿದಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಮತ್ತು ಚಾಮರಾಜನಗರ ನೋಟರಿಗಳ ಸಂಘದ ಅಧ್ಯಕ್ಷ ಪಿ. ರಮೇಶ್ ಮಾತನಾಡಿ, ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.

ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರ ಅಗತ್ಯವಿದೆ. ನೋಟರಿಗಳು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ, ಸಮಾಜಕ್ಕೆ ಉತ್ತಮ ಮಾದರಿಯಾಗಬೇಕು ಎಂದು ಅವರು ಸಲಹೆ ನೀಡಿದರು.

ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಮಧುಕರ್ ದೇಶಪಾಂಡೆ, ಪುಟ್ಟಸ್ವಾಮಿ, ಕಾಂಬ್ರೋಸ್, ಲಯನ್ ಜಿಲ್ಲಾ ರಾಜ್ಯಪಾಲ ಎನ್. ಕೃಷ್ಣೇಗೌಡ, ಕರ್ನಾಟಕ ನೋಟರಿಗಳ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ್, ಕಾರ್ಯದರ್ಶಿ ಸಿ.ಎಸ್. ಚಿಕ್ಕಣ್ಣೇಗೌಡ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕಾರ್ಯದರ್ಶಿ ಎಸ್. ಉಮೇಶ್ ಮೊದಲಾದವರು ಇದ್ದರು. ಕಮಲಾ ಪ್ರಾರ್ಥಿಸಿದರು. ಸುರೇಶ್ ಬಾಬು ನಿರೂಪಿಸಿದರು. ಎಸ್. ನಾಗರಾಜ್ ವಂದಿಸಿದರು.