ಸಾರಾಂಶ
ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಮಕ್ಕಳು ಪುಸ್ತಕ ಓದುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಆನಂದಪುರ
ಮಕ್ಕಳು ಪಠ್ಯ ಪುಸ್ತಕದೊಂದಿಗೆ ಇತರೆ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಟಿ.ಎಲ್.ಶಿವಕುಮಾರ್ ಕರೆ ನೀಡಿದರು.ಇಲ್ಲಿನ ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ಮಕ್ಕಳು ಪುಸ್ತಕ ಓದುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳು 21 ದಿನಗಳ ಕಾಲ ಪಠ್ಯ ಪುಸ್ತಕದೊಂದಿಗೆ ಇತರೆ ಪುಸ್ತಕಗಳನ್ನು ಪ್ರತಿದಿನ ಅರ್ಧ ತಾಸು ಓದಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಪ್ರತಿ ದಿನ ಶಾಲಾ ಮಕ್ಕಳು ಕಥೆ ಹೇಳುವುದು, ಮನೆಯಲ್ಲಿ ಅಜ್ಜ-ಅಜ್ಜಿ ಹೇಳುವ ಕಥೆ ಕೇಳುವುದು, ಪುಸ್ತಕ ಓದುವುದು. ಗ್ರಾಮದಲ್ಲಿ ಪುಸ್ತಕಗಳನ್ನು ಸಂಗ್ರಹಣೆ ಮಾಡಿ ಶಾಲಾ ಗ್ರಂಥಾಲಯಕ್ಕೆ ನೀಡುವುದು. ಸ್ಥಳೀಯ ಗ್ರಂಥಾಲಯಗಳಿಗೆ ಭೇಟಿ ನೀಡಿ ಉತ್ತಮ ಪುಸ್ತಕಗಳನ್ನು ಓದುವುದರ ಮೂಲಕ ಮಕ್ಕಳಲ್ಲಿನ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಪುಸ್ತಕಗಳು ಸಹಕಾರಿ ಯಾಗುತ್ತದೆ ಎಂದರು.ಪ್ರಾಥಮಿಕ ಹಂತದಲ್ಲಿ ಪಠ್ಯ ಪುಸ್ತಕ ಹೊರತುಪಡಿಸಿ ತಮಗೆ ಇಷ್ಟವಾಗುವ ಪುಸ್ತಕವನ್ನು, ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಪುಸ್ತಕ ಓದುವ ಅಭಿಯಾನ ಪ್ರಾರಂಭಿಸಿದೆ ಎಂದರು.
ಶಿವಮೊಗ್ಗ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಜಯಣ್ಣ ಗೌಡ್ರು ಮಾತನಾಡಿ, ಮಕ್ಕಳು ಪುಸ್ತಕಗಳನ್ನು ಓದುವಂತಹ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ. ಡಿ ರವಿಕುಮಾರ್, ಜಗನ್ನಾಥ್, ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಶ್ರೀನಿವಾಸ್ ಸಿಂಗ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.