- ಜಿಲ್ಲಾ ವರದಿಗಾರರ ಕೂಟದಿಂದ 2024-25, 2025-26ನೇ ಸಾಲಿನ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಿತ್ಯ ಬೆಳಗ್ಗೆ ಪತ್ರಿಕೆ ಓದದಿದ್ದರೆ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ, ದೃಶ್ಯ ಮಾಧ್ಯಮ, ಸೋಷಿಯಲ್ ಮೀಡಿಯಾಗಳಲ್ಲಿ ಏನೇ ಸುದ್ದಿ ನೋಡಿದರೂ ಮಾರನೆಯ ದಿನಪತ್ರಿಕೆ ಓದದಿದ್ದರೆ ಮನಸ್ಸಿಗೆ ಸಮಾಧಾನ ಆಗುವುದಿಲ್ಲ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ ತಿಳಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಿಂದ 2024-25 ಹಾಗೂ 2025-26ನೇ ಸಾಲಿನ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆಗೆ ಗೌರವಾರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ದೃಶ್ಯ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಆರ್ಭಟ ಹೆಚ್ಚಾಗಿದ್ದರೂ ಎಷ್ಟೇ ವೇಗದಲ್ಲಿ ಜಗತ್ತಿಗೆ ಸುದ್ದಿ ತಲುಪಿದರೂ ಪತ್ರಿಕೆ ಓದಿದ ನಂತರವಷ್ಟೇ ಮನಸ್ಸಿಗೆ ಸಮಾಧಾನ ಎಂದರು.
ಪತ್ರಿಕೋದ್ಯಮ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರವು ಹೊರಗಿನಿಂದ ಆಕರ್ಷಕ ವೃತ್ತಿಯಾಗಿ ಕಂಡರೂ ಅದರ ಹಿಂದೆ ಪತ್ರಕರ್ತರ ಕಠಿಣ ಪರಿಶ್ರಮ ಹಾಗೂ ಸವಾಲುಗಳಿವೆ. ಪತ್ರಿಕೋದ್ಯಮ ಕಷ್ಟವಾದರೂ ಸಮಾಜದಲ್ಲಿ ಅತ್ಯಂತ ಗೌರವಯುತ ವೃತ್ತಿಯಾಗಿದೆ. ಬಹುತೇಕ ಪತ್ರಕರ್ತರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬಂತೆ ನಟಿಸಬೇಕಾದ ಅನಿವಾರ್ಯತೆ ಈ ವೃತ್ತಿಯಲ್ಲಿದೆ. ಇಂತಹ ಕಷ್ಟಕರ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಗುರುತಿಸಿ, ವರದಿಗಾರರ ಕೂಟ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪತ್ರಕರ್ತರ ಒಳಗಿನ ನೈಜಪ್ರತಿಭೆ ಮತ್ತು ಬರಹಗಳು ಹೊರ ಬರಬೇಕಾದರೆ ಪತ್ರಕರ್ತರರು ಆರ್ಥಿಕವಾಗಿ ಸಬಲರಾಗುವುದು ಅಗತ್ಯ. ಅಂತಹವರಿಗೆ ಜೀವನ ಭದ್ರತೆ, ಸೂಕ್ತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ ಕರ್ತವ್ಯವಾಗಬೇಕು. ಮಾಧ್ಯಮವೆಂದರೆ ಬರೀ ಪತ್ರಕರ್ತರಷ್ಟೇ ಅಲ್ಲ, ಬೆಳಗ್ಗೆ ಪತ್ರಿಕೆ ವಿತರಣೆ ಮಾಡುವವರು, ಪ್ರಿಂಟಿಂಗ್ ವಿಭಾಗ ಹೀಗೆ ಅದರ ಹಿಂದೆ ದೊಡ್ಡ ಕುಟುಂಬ ಇದೆ. ಈ ಇಡೀ ವ್ಯವಸ್ಥೆಯ ಹಿತಕಾಯುವ ಕೆಲಸವಾಗಬೇಕು. ಸೂಕ್ತ ಭದ್ರತೆ, ವೈದ್ಯಕೀಯ ವೆಚ್ಚಗಳಿಗೆ ಸರ್ಕಾರದ ಬೆಂಬಲ ಸಿಗಬೇಕಿದೆ ಎಂದರು.
ದಾವಣಗೆರೆಯಲ್ಲಿ ಜಿ.ಎನ್. ನಾರಾಯಣ ರಾವ್, ಎಚ್.ಬಿ.ಮಂಜುನಾಥ ಅವರಂತಹ ಹಿರಿಯ ಪತ್ರಕರ್ತರು ಹೊಸಬರಿಗೆ ಮತ್ತು ಯುವಜನರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಸ್ಥಳೀಯ ಯುವಕ- ಯುವತಿಯರಿಗೆ ಮಾಧ್ಯಮ ಕ್ಷೇತ್ರದಲ್ಲಿ ಸೂಕ್ತ ತರಬೇತಿ ನೀಡಲು ದಾವಣಗೆರೆಯಲ್ಲಿ 2-3 ವರ್ಷಗಳ ಕೋರ್ಸ್ ನೀಡುವ ಮಾಧ್ಯಮ/ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆ ಅಥವಾ ತರಬೇತಿ ಕೇಂದ್ರ ಪ್ರಾರಂಭವಾದರೆ, ಇಲ್ಲಿನ ಮಕ್ಕಳು ಮಾಧ್ಯಮ ಕ್ಷೇತ್ರದಲ್ಲಿ ಮುಂದೆ ಬರಲು ದೊಡ್ಡ ಅವಕಾಶ ಆಗುತ್ತದೆ. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕು ಎಂದು ದಿನೇಶ ಕೆ. ಶೆಟ್ಟಿ ತಿಳಿಸಿದರು.ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೂಟದ ಹಿರಿಯ ಉಪಾಧ್ಯಕ್ಷ ಮಂಜುನಾಥ ಗೌರಕ್ಕಳವರ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಕಾನಿಪಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ, ಪಿಆರ್‌ಒ ಪಿ.ಎಸ್. ಲೋಕೇಶ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಉಪಾಧ್ಯಕ್ಷರಾದ ಸದಾನಂದ ಹೆಗಡೆ, ಸಿದ್ದಯ್ಯ ಹಿರೇಮಠ, ಎ.ಎಲ್. ತಾರಾನಾಥ, ನವದೆಹಲಿಯ ಪಿಟಿಐ ವರದಿಗಾರರಾದ ಲಕ್ಷ್ಮಿದೇವಿ, ಮಾಜಿ ಮೇಯರ್ ಎಸ್.ಟಿ.ವೀರೇಶ ಇತರರು ಇದ್ದರು. ಚೇತನ್ ಬಸಾಪುರ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಕಬ್ಬೂರು ಸ್ವಾಗತಿಸಿದರು. ಮಹಾಂತೇಶ್ ಕುರಬೇಟ ನಿರೂಪಿಸಿದರು. ರಾ.ರವಿಬಾಬು ವಂದಿಸಿದರು.
- - -(ಬಾಕ್ಸ್)
* ಪ್ರಶಸ್ತಿ ಪುರಸ್ಕೃತರು, ಸನ್ಮಾನಿತರು 2024-25ನೇ ಸಾಲಿನ ಮಾಧ್ಯಮ ಪ್ರಶಸ್ತಿಯನ್ನು ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ವಿಜಯ ಕರ್ನಾಟಕ ಹಿರಿಯ ಉಪ ಸಂಪಾದಕ ಪ್ರಸನ್ನ ಜವಳಿ, ವಿಜಯವಾಣಿ ಹಿರಿಯ ಉಪ ಸಂಪಾದಕ ಹರ್ಷ ಪುರೋಹಿತ, ಪಬ್ಲಿಕ್ ವಾಯ್ಸ್ ಹಿರಿಯ ವರದಿಗಾರ ಎ.ಸಿ. ನಾಗರಾಜ, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಬಿ.ಜಿ.ಮಹದೇವ, 2024-25ನೇ ಸಾಲಿನ ಜೀವಮಾನ ಸಾಧನೆ ಗೌರವವನ್ನು ಕರ್ನಾಟಕ ಎಕ್ಸ್‌ಪ್ರೆಸ್ ಸಂಪಾದಕ ಕೆ.ಚಂದ್ರಣ್ಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ, ಹಿರಿಯ ವರದಿಗಾರ ಆರ್.ಎಸ್. ತಿಪ್ಪೇಸ್ವಾಮಿ, ಸುಭಾಷಿತ ಪತ್ರಿಕೆ ಸಂಪಾದಕ ಡಾ. ಕೆ.ಜೈಮುನಿ, ಜಿಲ್ಲಾ ಸಮಾಚಾರ ಪತ್ರಿಕೆ ಸಂಸ್ಥಾಪಕ ಸಂಪಾದಕ ವಿ. ಹನುಮಂತಪ್ಪ ಅವರಿಗೆ ನೀಡಿ ಗೌರವಿಸಲಾಯಿತು.2025-26ನೇ ಸಾಲಿನ ಮಾಧ್ಯಮ ಪ್ರಶಸ್ತಿಯನ್ನು ನಗರ ಮಿಡಿತ ಸಂಪಾದಕ ಜಿ.ಎಸ್. ವಸಂತಕುಮಾರ, ಟಿವಿ 5 ವರದಿಗಾರ ಅಣ್ಣಪ್ಪ ಕುಂದುವಾಡ, ಹಿರಿಯ ಪತ್ರಿಕಾ ಛಾಯಾಗ್ರಹಕ ವಿಜಯ್ ಜಾಧವ್, ನಗರವಾಣಿ ವರದಿಗಾರ ಮಹೇಶ ಕಾಶೀಪುರ, ರಿಪಬ್ಲಿಕ್ ಕನ್ನಡ ಕ್ಯಾಮೆರಾಮ್ಯಾನ್ ಶಿವರಾಜ ಇಳಿಗೇರ್ ಅವರಿಗೆ ಪ್ರದಾನ ಮಾಡಲಾಯಿತು. 2025-26ನೇ ಸಾಲಿನ ಜೀವಮಾನ ಸಾಧನೆಗಾಗಿ ವಿಸ್ಮಯವಾಣಿ ಸಂಪಾದಕ ಡಾ. ಬಿ.ವಾಸುದೇವ, ವಾರ್ತಾ ವಿಹಾರ ಸಂಪಾದಕ ಸಿ.ಪಿ. ಸತೀಶಕುಮಾರ, ಜನಸ್ಪಂದನ ಸಂಪಾದಕ ಕೆ.ಉಮೇಶ ಕಾಡಪ್ಪ, ಜನಕ್ರಾಂತಿ ಸಂಪಾದಕ ಕೆ.ಆರ್.ಗಂಗರಾಜು ಅವರಿಗೆ ಜೀವಮಾನ ಸಾಧನೆ ಗೌರವ ನೀಡಿ ಗೌರವಿಸಲಾಯಿತು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರಜಾವಾಣಿಯ ಸಿದ್ದಯ್ಯ ಹಿರೇಮಠ, ದೂರದರ್ಶನದ ಎ.ಎಲ್. ತಾರಾನಾಥ, ಸುಭಾಷಿತ ಪತ್ರಿಕೆ ಸಂಪಾದಕ ಡಾ. ಕೆ.ಜೈಮುನಿ, ವಿಜಯವಾಣಿ ಹಿರಿಯ ವರದಿಗಾರ ರಮೇಶ ಜಹಗೀರದಾರ, ವಿಜಯ ಕರ್ನಾಟಕದ ಯಳನಾಡು ಮಂಜುನಾಥ, ಹಿರಿಯ ಛಾಯಾಗ್ರಹಕ ವಿವೇಕ್ ಎಲ್. ಬದ್ದಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಉದಯವಾಣಿಯ ಎಚ್.ಕೆ. ನಟರಾಜ್ ಮತ್ತು ಆರ್ ಕನ್ನಡ ನ್ಯೂಸ್ನ ವಿಠ್ಠಲ್ ಕ್ಯಾರವಾಡ ಅವರನ್ನು ಸನ್ಮಾನಿಸಲಾಯಿತು.- - -
-(ಫೋಟೋ ಬರಲಿವೆ)ಶ್ರೀಶೈಲ ಶ್ರೀಗಳ ಆಶೀರ್ವಚನದ ಒಂದು ಸುದ್ದಿ ಬರಲಿದೆ).
- - -