ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಓದು ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಶಿಬಿರಾರ್ಥಿಗಳು ಬೇಸಿಗೆ ಶಿಬಿರದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೆಸಿಐ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ೨೩ನೇ ವರ್ಷದ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ವಿದ್ಯಾರ್ಥಿಗಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ತರಬೇತುದಾರರ ಮಾರ್ಗದರ್ಶನ ಪಡೆದು ಉತ್ತಮ ಕ್ರೀಡಾಪಟುಗಳಾಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು, ಓದಿನ ಜೊತೆಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ ಆರೋಗ್ಯವಂತರಾಗಬೇಕು, ಶಿಬಿರದಲ್ಲಿ ಕಲಿತ ಕ್ರೀಡೆಗಳನ್ನು ನಿತ್ಯ ಅಭ್ಯಾಸ ಮಾಡಿ ಉತ್ತಮ ಆರೋಗ್ಯ ಹೊಂದಬೇಕು ಹಾಗೂ ಕ್ರೀಡೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಇಲಾಖೆಯಿಂದ ಒದಗಿಸಲಾಗುವುದು ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿ, ಕ್ರೀಡಾ ಸಂಸ್ಥೆಯಿಂದ ಉತ್ತಮ ಕೆಲಸ ಮಾಡುತ್ತಿದ್ದಾರೆ, ಅನೇಕ ಸ್ವಯಂ ಸೇವಕರು, ತರಬೇತುದಾರರು ಸ್ವಯಂ ಪ್ರೇರಿತರಾಗಿ ಬಂದು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ, ಅವರು ನೀಡುವ ತರಬೇತಿ ಸಫಲತೆಯಾದಾಗ ಮಾತ್ರ ಅದಕ್ಕೆ ಅರ್ಥ ಬರಲಿದೆ, ಹಾಗಾಗಿ ಮಕ್ಕಳು ತರಬೇತಿಯ ಸಫಲತೆಯನ್ನು ಪಡೆದುಕೊಳ್ಳಬೇಕು, ಮಕ್ಕಳು ಮೊಬೈಲ್‌ಗೆ ದಾಸರಾಗಿದ್ದಾರೆ, ಮೊಬೈಲ್ ಬಳಕೆ ಬಿಟ್ಟು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಲವಲವಿಕೆಯಿಂದ ಇರಬೇಕು ಎಂದರು.
ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಕಳೆದ ೨೩ ವರ್ಷಗಳಿಂದ ಸತತವಾಗಿ ಬೇಸಿಕೆ ಶಿಬಿರ ಆಯೋಜನೆ ಮಾಡಿ ೨೦೦ರಿಂದ ೩೦೦ ಮಕ್ಕಳಿಗೆ ಅವರಿಗಿಷ್ಟವಾದ ಕ್ರೀಡೆಗಳಲ್ಲಿ ತರಬೇತುದಾರರು ತರಬೇತಿ ನೀಡಿದ್ದಾರೆ, ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ, ವಿದ್ಯಾರ್ಥಿಗಳು ಬೇಸಿಗೆ ಶಿಬಿರದ ಪ್ರಯೋಜನ ಪಡೆದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸನ್ನಹಳ್ಳಿ ವಿರೂಪಾಕ್ಷಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಮಹೇಶ್, ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಾದ ಜಿ.ಎ.ರವೀಂದ್ರ, ಸಿ.ಎಂ.ವೆಂಕಟೇಶ್, ಮುನೇಗೌಡ, ಲೋಕೇಶ್, ಆನಂದ್, ಪುಟ್ಟಸ್ವಾಮಿ, ಡಿ.ಎನ್.ವೆಂಕಟೇಶ್, ಜೆಸಿಐ ಅಧ್ಯಕ್ಷ ಸುರೇಶ್, ತರಬೇತುದಾರರು, ಶಿಬಿರಾರ್ಥಿಗಳು ಮುಂತಾದವರು ಇದ್ದರು.