ದಲಿತ ಹೋರಾಟಗಾರರಿಗೆ ಓದು ಅವಶ್ಯಕ

| Published : Sep 13 2025, 02:04 AM IST

ಸಾರಾಂಶ

ಜೈಭೀಮ್ ವಾರಿಯರ್ಸ್ ರಾಜ್ಯಾಧ್ಯಕ್ಷ ಹರೀಶ್‍ ಕುಮಾರ್‌ರವರನ್ನು ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ವಿಚಾರ ಗೋಷ್ಠಿಯಲ್ಲಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇಂದಿನ ದಲಿತ ಹೋರಾಟಗಾರರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಚಳುವಳಿಗಾರ ಪ್ರೊ.ಬಿ.ಕೃಷ್ಣಪ್ಪನವರ ಓದು ಅತ್ಯವಶ್ಯಕ ಎಂದು ಸಾಹಿತಿ ಜಡೆಕುಂಟೆ ಮಂಜುನಾಥ್ ತಿಳಿಸಿದರು.

ಜೈಭೀಮ್ ವಾರಿಯರ್ಸ್ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ಮತ್ತು ಅಪರಾಧ ನಿರ್ಮೂಲನಾ ಮಂಡಳಿ ಆಶ್ರಯದಲ್ಲಿ ಇತ್ತೀಚೆಗೆ ಪತ್ರಕರ್ತರ ಭವನದಲ್ಲಿ ನಡೆದ ಪದಗ್ರಹಣ, ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

80ದಶಕದಲ್ಲಿ ಈ ನಾಡಿನಲ್ಲಿ ಶೋಷಿತರು, ದಲಿತರ ಮೇಲೆ ನಡೆಯುತ್ತಿದ್ದ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರಗಳ ವಿರುದ್ಧ ಹುಟ್ಟಿಕೊಂಡ ದಲಿತ ಚಳುವಳಿ ಲಕ್ಷಾಂತರ ದಲಿತರ ಎದೆಯಾಳದಲ್ಲಿ ಪ್ರತಿಭಟನೆಯ ಕಿಚ್ಚು ಹಚ್ಚಿದೆ. ಈಗಿನ ಹೋರಾಟಗಾರರು ಅಂಬೇಡ್ಕರ್ ಹಾಗೂ ಪ್ರೊ.ಬಿ. ಕೃಷ್ಣಪ್ಪನವರ ವಿಚಾರ ಧಾರೆಗಳನ್ನು ತಿಳಿದುಕೊಂಡಾಗ ಮಾತ್ರ ಅವರ ಆಶಯಗಳನ್ನು ಗೌರವಿಸಿದಂತಾಗುತ್ತದೆ ಎಂದು ಹೇಳಿದರು.

ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ಮಾತನಾಡಿ, ದಲಿತ ರಾಜಕಾರಣಿಗಳು ಮೇಲ್ಜಾತಿಯವರ ಗುಲಾಮರಾಗಿದ್ದಾರೆ. ಚಿತ್ರದುರ್ಗದ ಗೋನೂರಿನ ಸಮೀಪ ದಲಿತ ವಿದ್ಯಾರ್ಥಿನಿಯನ್ನು ಸುಟ್ಟು ಹತ್ಯೆಗೈದಿದ್ದರು ಮೀಸಲಾತಿಯಡಿ ಆಯ್ಕೆಯಾಗಿರುವ ಸಂಸದರಾಗಲಿ, ಶಾಸಕರಾಗಲಿ ದುಃಖತಪ್ತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವಷ್ಟು ಮಾನವೀಯತೆಯಿಲ್ಲದಂತೆ ವರ್ತಿಸಿರುವುದು ಅತ್ಯಂತ ಖೇಧದ ಸಂಗತಿ. ಇನ್ನು ಮುಂದೆ ವಲಸೆ ರಾಜಕಾರಣಿಗಳನ್ನು ಚಿತ್ರದುರ್ಗಕ್ಕೆ ಬಿಟ್ಟುಕೊಳ್ಳುವುದಿಲ್ಲ. ಜಿಲ್ಲಾದ್ಯಂತ ಹೋರಾಟ ನಡೆಸಿ ದಲಿತರನ್ನು ಜಾಗೃತಿಗೊಳಿಸಲಾಗುವುದು ಎಂದರು.

ಜೈಭೀಮ್ ವಾರಿಯರ್ಸ್ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ಮತ್ತು ಅಪರಾಧ ನಿರ್ಮೂಲನಾ ಮಂಡಳಿ ಸಂಸ್ಥಾಪಕ ಹೂವಿನಹಳ್ಳಿ ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಎಲ್ಲಾ ವರ್ಗದವರು ಜೈಭೀಮ್ ಎನ್ನುವ ಘೋಷಣೆಯನ್ನು ಕೂಗಲು ಆರಂಭಿಸಿದ್ದಾರೆ. ಕಾರಣ ಅವರು ಎಲ್ಲರಿಗೂ ಅನಿವಾರ್ಯ ಎನ್ನುವಂತಾಗಿದೆ. ದಲಿತ ಚಳುವಳಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪನವರನ್ನು ಪರಿಚಯಿಸಿದೆ. ದಲಿತ ಚಳುವಳಿ ಒಂದು ದೊಡ್ಡ ವಿಶ್ವವಿದ್ಯಾಲಯವಿದ್ದಂತೆ ಎಂದರು.

ಲೇಖಕ ಎಚ್.ಆನಂದ್‍ಕುಮಾರ್ ಮಾತನಾಡಿ, ಬುದ್ಧನ ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದಲಿತ ಚಳುವಳಿಯ ಗುರಿ ತಲುಪಬೇಕಿದೆ ಎಂದು ನುಡಿದರು.

ಈ ವೇಳೆ ಸುಜಾತ ಚಂದ್ರಶೇಖರ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ್, ಅಟ್ರಾಸಿಟಿ ಕಮಿಟಿ ಮಾಜಿ ಅಧ್ಯಕ್ಷ ದಲಿತ ಮುಖಂಡ ಬಿ.ರಾಜಪ್ಪ, ಕೆಂಚಪ್ಪ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.