ಮಡಿಕೇರಿ: ಓದಿನಿಂದ ಜೀವನ ಸಾರ್ಥಕವಾಗುತ್ತದೆ. ಮನೆ ಕಟ್ಟುವ ಸಂದರ್ಭದಲ್ಲಿ ಹೇಗೆ ನಾವು ದೇವರ ಕೋಣೆ, ಮಲಗುವ ಕೋಣೆ, ಅಡುಗೆ ಕೋಣೆಗಳನ್ನು ನಿರ್ಮಿಸುವಂತೆ ಪುಸ್ತಕದ ಕೋಣೆ ಅಥವಾ ಗ್ರಂಥಾಲಯವನ್ನು ನಿರ್ಮಿಸಬೇಕು. ಅದು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಯಪಡಿಸುವ ಸೇತುವೆಯಾಗಬಲ್ಲದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟಿದ್ದಾರೆ.

ಅವರು ಮನೆಗೊಂದು ಗ್ರಂಥಾಲಯ ಯೋಜನೆಯ ಅನ್ವಯ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಅನುಷ್ಠಾನ ಮಾಡಿ ಟಿ.ಪಿ. ರಮೇಶ್ ಅವರಿಗೆ ಅಭಿನಂದನಾ ಪತ್ರ ನೀಡಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಾಹಿತ್ಯ ಮತ್ತು ಗ್ರಂಥಾಲಯ ನಿಂತ ನೀರಾಗಬಾರದು. ಸದಾ ಚಲಾವಣೆಯಲ್ಲಿರಬೇಕು. ದಿನಕ್ಕೆ ಒಂದು ಗಂಟೆಯಾದರೂ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಕನ್ನಡ ಪುಸ್ತಕ ಪ್ರಾಧಿಕಾರದ ಜಾಗೃತ ಸಮಿತಿ ಸಂಚಾಲಕ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಯಾರಿಗೂ ಗ್ರಂಥಾಲಯ ಸ್ಥಾಪಿಸಲು ಪುಸ್ತಕವನ್ನು ಪುಕ್ಕಟೆಯಾಗಿ ನೀಡುವುದಿಲ್ಲ. ಆದರೆ ಪುಸ್ತಕ ಖರೀದಿಸಿ ಮನೆಯಲ್ಲಿ ಒಂದು ಗ್ರಂಥಾಲಯ ನಿರ್ಮಿಸಿ ಮುಂದಿನ ಪೀಳಿಗೆಗೆ ನಾಡು-ನುಡಿಯ ಸಾಹಿತ್ಯ ಸಂಸ್ಕೃತಿಯ ಆಚಾರ ವಿಚಾರಗಳ ಪರಿಚಯ ಮಾಡಿಕೊಡುವ ಮತ್ತು ಪುಸ್ತಕ ಪ್ರಪಂಚವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ ಎಂದರು.ಜಾಗೃತ ಸಮಿತಿಯ ಕಾರ್ಯದರ್ಶಿ ರಂಜಿತ್ ಕವಲಪಾರ ಸ್ವಾಗತಿಸಿ, ನಿರೂಪಿಸಿದರು. ಚಂದನ್ ಕಾಮತ್, ವಾಸು ರೈ, ನಿರ್ಮಲ ರಮೇಶ್, ಎಚ್‌.ಎಲ್. ದಿವಾಕರ್, ರಾಜಾರಾವ್, ದೀಪಕ್ ಪೊನ್ನಪ್ಪ ಇದ್ದರು.