ಕನ್ನಡಪ್ರಭ ವಾರ್ತೆ ಹುಮನಾಬಾದ
ಏಕಾಗ್ರತೆ ಓದುವ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ದಿನಪತ್ರಿಕೆಗಳ ಅಧ್ಯಯನ ಅತ್ಯಂತ ಅವಶ್ಯಕ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.ಪಟ್ಟಣದ ಹೊರವಲಯದ ಶಾಸಕರ ಅತಿಥಿ ಗೃಹ ಸಭಾಂಗಣದಲ್ಲಿ ಗುರುವಾರ ಸಾಯಂಕಾಲ ಬಿಜೆಪಿ ಮಂಡಲದಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಪ್ರಯುಕ್ತ ವರದಿಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಓದುಗರಿಗೆ ಪತ್ರಿಕೆಗಳನ್ನು ಕಡಿಮೆ ಬೆಲೆಗೆ ನೀಡಲು ಪತ್ರಿಕೆಗಳು ತಮ್ಮ ಆರ್ಥಿಕ ನಿರ್ವಹಣೆಗಾಗಿ ಜಾಹೀರಾತುಗಳ ಮೇಲೆ ಅವಲಂಬಿತವಾಗಿವೆ.
ಸುಳ್ಳು ಸುದ್ದಿಗಳ ನಡುವೆಯೂ ಮುದ್ರಿತ ಮಾಧ್ಯಮದಲ್ಲಿ ನಿಖರತೆ ಹಾಗೂ ನಂಬಿಕಾರ್ಹತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ದಿನಪತ್ರಿಕೆಗಳನ್ನು ಓದುವುದರಿಂದ ದೇಶ, ವಿದೇಶ, ರಾಜ್ಯದಲ್ಲಿ ನಿತ್ಯ ನಡೆಯುತ್ತಿರುವ ವಿದ್ಯಮಾನಗಳನ್ನು ಅರಿತುಕೊಳ್ಳಲು ಹಾಗೂ ನಮ್ಮ ಜ್ಞಾನ ವಿಸ್ತಾರವಾಗುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕಾರಿಯಾಗಲಿದ್ದು, ಇಂದಿನ ಯುವಕರು ಮೊಬೈಲ್‌ಗಳಲ್ಲಿ ಕಾಲಹರಣ ಮಾಡುವ ಬದಲು ನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಆರ್ಯ ಮಾತನಾಡಿ, ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿದ್ದು, ಸಮಾಜದ ತಪ್ಪುಗಳನ್ನು ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ ನೈಜ ಸಂಗತಿಗಳನ್ನು. ಸರ್ಕಾರದ, ರಾಜಕೀಯ ತಪ್ಪುಗಳನ್ನು ಧೈರ್ಯವಾಗಿ ಪ್ರಶ್ನಿಸುವುದು. ತಿದ್ದುವ ದೊಡ್ಡ ಜವಾಬ್ದಾರಿಯೊಂದಿಗೆ ಜನರಿಗೆ ತಲುಪಿಸುವ ಜವಾಬ್ದಾರಿ ಅವುಗಳ ಮೇಲಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ದೇಶವು ಸರಿ ಹಾದಿಯಲ್ಲಿ ಸಾಗಲು ಪತ್ರಕರ್ತರ ಲೇಖನಿ ಸತ್ಯ, ನ್ಯಾಯ ಮತ್ತು ಜನಪರ ಕಾಳಜಿಯಿಂದ ಕೂಡಿರಬೇಕು. ಯಾವುದೇ ಪಕ್ಷಪಾತವಿಲ್ಲದೆ ನೈಜ ಸಂಗತಿಗಳೊಂದಿಗೆ ಜನಸಾಮಾನ್ಯರ ಧ್ವನಿಯಾಗಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಅನೀಲ ಪಸರ್ಗಿ, ಗೋಪಾಲಕೃಷ್ಣ ಮೊಹಳೆ ಮಾತನಾಡಿದರು. ವಿಶ್ವನಾಥ ಪಾಟೀಲ್ ಮಾಡಗೋಳ, ಗಜೇಂದ್ರ ಕನಕಟ್ಟಕರ, ಶೀವರಾಜ ಚೀನಕೇರಿ, ರವಿಕುಮಾರ ಹೊಸಳ್ಳಿ, ವಿನಾಯಕ ಮಂಕೊಜಿ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ದೂರ್ಯೋಧನ ಹುಗಾರ, ಹುಮನಾಬಾದ ಅಧ್ಯಕ್ಷ ಸಂಜುಕುಮಾರ ಜುನ್ನಾ, ಕಾರ್ಯದರ್ಶಿ ಗುಂಡಪ್ಪ ಅತಿವಾಳ, ಚಿಟಗುಪ್ಪ ತಾಲೂಕು ಅಧ್ಯಕ್ಷ ಕೃಷ್ಣ ಪಂಚಾಳ, ಕಾರ್ಯದರ್ಶಿ ಮುಸ್ತಫಾ ಇತರರು ಇದ್ದರು. .