ಬೇಲೂರು ಚನ್ನಕೇಶವ ಸ್ವಾಮಿ ಭಕ್ತರಿಗೆ ಸಿದ್ಧವಾದ ಕುಡಿವ ನೀರಿನ ಘಟಕ

| Published : Mar 19 2024, 12:48 AM IST

ಸಾರಾಂಶ

ಕನ್ನಡಪ್ರಭ ವರದಿಯಿಂದ ಕೊನೆಗೂ ಎಚ್ಚೆತ್ತ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಆಡಳಿತ ಮಂಡಳಿಯವರು ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸುವ ಮೂಲಕ ಚನ್ನಕೇಶವನ ಭಕ್ತರ ಶಾಪದಿಂದ ಸದ್ಯಕ್ಕೆ ಪಾರಾಗಿದ್ದಾರೆ.

ದೇಗುಲದ ಹದಗೆಟ್ಟ ಶುದ್ಧ ಕುಡಿಯುವ ಘಟಕದ ಸ್ಥಿತಿ ಬಗ್ಗೆ ಗಮನಸೆಳೆದಿದ್ದ ಕನ್ನಡಪ್ರಭ । 2 ತಿಂಗಳಿಂದ ನೀರಿಗೆ ಪರದಾಡುತ್ತಿದ್ದ ಭಕ್ತರು

ಎ.ರಾಘವೇಂದ್ರ ಹೊಳ್ಳ

ಕನ್ನಡಪ್ರಭ ವಾರ್ತೆ ಬೇಲೂರು

ಕನ್ನಡಪ್ರಭ ವರದಿಯಿಂದ ಕೊನೆಗೂ ಎಚ್ಚತ್ತ ಇಲ್ಲಿನ ಚನ್ನಕೇಶವಸ್ವಾಮಿ ದೇಗುಲದ ಆಡಳಿತ ಮಂಡಳಿಯವರು ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸುವ ಮೂಲಕ ಚನ್ನಕೇಶವನ ಭಕ್ತರ ಶಾಪದಿಂದ ಸದ್ಯಕ್ಕೆ ಪಾರಾಗಿದ್ದಾರೆ.

ಕನ್ನಡಪ್ರಭ ವರದಿಯಿಂದ ಕೊನೆಗೂ ಎಚ್ಚತ್ತ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಆಡಳಿತ ಮಂಡಳಿಯವರು ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸುವ ಮೂಲಕ ಚನ್ನಕೇಶವನ ಭಕ್ತರ ಶಾಪದಿಂದ ಸದ್ಯಕ್ಕೆ ಪಾರಾಗಿದ್ದಾರೆ.ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಕುಡಿಯುವ ನೀರಿನ ಘಟಕ ಹದಗೆಟ್ಟು ಕಳೆದ ಎರಡು ತಿಂಗಳಿಂದ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಿಗದಂತಾಗಿತ್ತು. ಇದರ ಬಗ್ಗೆ ಕನ್ನಡಪ್ರಭ ಪತ್ರಿಕೆಯು ‘ತಿಂಗಳು ಕಳೆದರೂ ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ. ಕಣ್ಮುಚ್ಚಿ ಕುಳಿತ ದೇಗುಲದ ಆಡಳಿತ ಮಂಡಳಿ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ವಿಶ್ವ ವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಹಿಂಭಾಗ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ತಿಂಗಳಾಗಿದ್ದರೂ ಕುಡಿಯಲು ನೀರಿಲ್ಲದೇ ಭಕ್ತರು, ಪ್ರವಾಸಿಗರು ಹಾಗೂ ಬೇಲೂರಿನ ಜನರು ದೇಗುಲ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದರು.

ಈ ಬಗ್ಗೆ ಹಳೇಬೀಡು ಬೇಲೂರು ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್ ಹಾಗೂ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಕುಮಾರ್ ನಾಯಕ್ ದೇವಾಲಯದ ಆಡಳಿತದವರ ಮೇಲೆ ಕಿಡಿಕಾರಿ ಆದಷ್ಷು ಬೇಗ ಇದನ್ನು ಸರಿಪಡಿಸಿ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದರು.

ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ನಾರಾಯಣಸ್ವಾಮಿ ಮಾತನಾಡಿ, ಯಂತ್ರಕ್ಕೆ ಏನೋ ತೊಂದರೆಯಾಗಿದೆ. ಆದಷ್ಟು ಬೇಗ ದುರಸ್ತಿ ಮಾಡಿಸುತ್ತೇವೆ ಎಂದು ಹೇಳಿದ್ದರು.

ಈ ವರದಿ ಬೆನ್ನಲೆ ಎಚ್ಚೆತ್ತ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯೋನ್ಮುಖರಾಗಿ ದುರಸ್ತಿ ಮಾಡುವ ಮೆಕ್ಯಾನಿಕ್ ಕರೆಸಿ ಹಾಳಾಗಿದ್ದ ಸರ್ಕ್ಯೂಟ್ ಬೋರ್ಡ್‌ಗಳನ್ನು ಸರಿಪಡಿಸಿ ನೀರು ಬರುವಂತೆ ಮಾಡಿದೆ. ಪತ್ರಿಕೆಯ ಜತೆ ಮಾತನಾಡಿದ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಭಕ್ತಾದಿಗಳ ಅನುಕೂಲಕ್ಕಾಗಿ ನೀರಿನ ಘಟಕವನ್ನು ನಿರ್ಮಿಸಲಾಗಿದ್ದು ಅದರಲ್ಲಿ ಪ್ರತ್ಯೇಕವಾಗಿ ಉಚಿತ ನೀರಿಗಾಗಿ 5 ರು. ನಾಣ್ಯ ಹಾಕುವ ವ್ಯವಸ್ಥೆಗಾಗಿ ಎರಡು ನಲ್ಲಿ ಮಾಡಿಸಿದ್ದೆವು. ನೀರು ನಿಧಾನವಾಗಿ ಬರುತ್ತದೆ ಎಂದು ಕೆಲವರು ಒಡೆದು ಹಾಕಿದ್ದಾರೆ. ಇದರಿಂದ ಈ ರೀತಿ ತೊಂದರೆ ಆಗಿದೆ. ದಯವಿಟ್ಟು ಭಕ್ತಾದಿಗಳು ಹಾಗೂ ಸಾರ್ವಜನಿಕರು ನೀರು ಪೋಲಾಗದಂತೆ ಹಾಗೂ ನೀರಿನ ಯಂತ್ರ ಹಾಳಾಗದಂತೆ ಕಾಪಾಡಿಕೊಳ್ಳಬೇಕು. ಏಕೆಂದರೆ ಇದು ಎಲ್ಲರ ಆಸ್ತಿ, ಸಾರ್ವಜನಿಕರಿಗಾಗಿಯೇ ಇರುವುದು. ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜನರ ಸೇವೆಗೆ ಸಿದ್ಧಗೊಂಡಿರುವ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ.