ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಲ್ಲೇ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕಾದರೇ ತಮ್ಮಲ್ಲಿರುವ ಸಾಮರ್ಥ್ಯಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ. ಶಶಿಧರ್ ಭಟ್ ತಿಳಿಸಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಚಾಮುಂಡಿ ವಲಯ ಅಂತರ ಕಾಲೇಜು ಪುರುಷರ ಟೇಬಲ್ ಟೆನ್ನಿಸ್ ಸ್ಪರ್ಧೆ, ಮೈಸೂರು ನಗರ ಅಂತರ ಕಾಲೇಜುಗಳ ಮಹಿಳೆ ಹಾಗೂ ಪುರುಷರ ಚೆಸ್ ಮತ್ತು ಟೆನ್ನಿಸ್ ಸ್ಪರ್ಧೆಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಜೊತೆಗೆ ವಿದ್ಯಾರ್ಥಿಗಳು ತಮ್ಮಲ್ಲಿರುವ ನಕಾರಾತ್ಮಕ ಅಂಶಗಳನ್ನು ಗುರುತಿಸಿ, ಆ ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದು ಮತ್ತು ವಿಫುಲವಾಗಿ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳುವಾಗ ಬರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಛಲವನ್ನು ಹೊಂದಿರಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹ ಅಪರಿಮಿತವಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಕ್ರೀಡೆಯಿಂದಾಗಿ ಶಿಸ್ತು ಮತ್ತು ಏಕಾಗ್ರತೆ ಹೆಚ್ಚುತ್ತದೆ. ಮೆದುಳು ಮತ್ತು ಶಾರೀರಿಕ ಅಂಗಗಳು ಸಂಯೋಜನೆಗೊಂಡಾಗ ಯಶಸ್ವಿ ಕ್ರೀಡಾ ಪ್ರದರ್ಶನವನ್ನು ನೀಡಬಹುದು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಉತ್ತಮ ಶ್ರೇಯಾಂಕಗಳನ್ನು ಗಳಿಸುವುದರ ಮೂಲಕ ಉನ್ನತ ವಿದ್ಯಾಭ್ಯಾಸದಲ್ಲಿ ದೊರೆಯುವ ಮೀಸಲಾತಿ ಮತ್ತು ನೌಕರಿಯಲ್ಲಿ ದೊರೆಯುವ ಮೀಸಲಾತಿಗಳನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ಮೈಸೂರು ನಗರದ ಹಾಗೂ ಮೈಸೂರು ವಿವಿ ವ್ಯಾಪ್ತಿಗೊಳಪಡುವ ಕಾಲೇಜುಗಳಿಂದ ಮೂರು ಸ್ಪರ್ಧೆಗಳಿಗೂ 50 ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಶ್ರೀಶೈಲರಾಮಣ್ಣವರ್, ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎನ್. ಹರಿಪ್ರಸಾದ್ ಇದ್ದರು. ಅನು ಪ್ರಾರ್ಥಿಸಿದರು. ಡಿ.ಆರ್. ಕುಮುದ ಸ್ವಾಗತಿಸಿದರು. ಟಿ.ಎಂ. ಮಾದೇಶ್ ಗೌಡ ವಂದಿಸಿದರು.