ಸಾರಾಂಶ
ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗ ನಟ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದಿದ್ದು, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು : ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗ ನಟ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದಿದ್ದು, ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ‘ಸಮಾಧಿ ಸ್ಥಳವನ್ನು ಖರೀದಿಸಲು ನಾವು ಸಿದ್ಧ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿ ಕೊಡಿ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಲಿ’ ಎಂದು ಹೇಳಿದ್ದಾರೆ.
ಈ ಕುರಿತು ಅವರು, ‘ನ್ಯಾಯಾಲಯಕ್ಕೆ ಹೋಗುವುದಾದರೆ ನಾನೂ ಬರಲು ಸಿದ್ಧ. ನಮಗೆ ಮೇರು ನಟನಿಗೆ ಪ್ರಾರ್ಥನೆ ಸಲ್ಲಿಸಲು, ಗೌರವ ಸಲ್ಲಿಸಲು ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ. ಅವರ ಸ್ಮಾರಕ ಒಡೆದು ಹಾಕಿದ್ದರಿಂದ ನಾವು ವರ್ಷಾನುಗಟ್ಟಲೆ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನ ಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ’ ಎಂದಿದ್ದಾರೆ.
‘ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕ ಉಳಿಸಿಕೊಳ್ಳುವುದಕ್ಕೆ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೇವೆ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಪ್ರಯೋಜನವಾಗಲಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ ಅವರ ಮನವೊಲಿಸಿ, ಅವರಿಗೆ ಸಾಹಸಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡಿ ಎಂದು ಮನವಿ ಮಾಡಲು ನಾನು ತಯಾರಿದ್ದೇನೆ’ ಎಂದು ಹೇಳಿದ್ದಾರೆ.
‘ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ. ಕಿಚ್ಚ ಆಗಿ ಅಲ್ಲ. ನನಗೆ ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಂತಹ ಒಬ್ಬ ಮೇರು ನಟನಿಗೆ ಬೆಂಗಳೂರಿನಲ್ಲಿ ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗವೂ ಇಲ್ಲ ಎಂದಾದರೆ ಇದು ಅತ್ಯಂತ ಖಂಡನೀಯ ವಿಷಯ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ವಿಡಿಯೋ ಮಾಡಿ ಹಂಚಿಕೊಂಡಿರುವ ಅವರು ಅಭಿಮಾನಿಗಳನ್ನು ಉದ್ದೇಶಿಸಿ, ‘ಕೈಚಾಚಿದ್ದು ಸಾಕು, ಕಣ್ಣೀರು ಹಾಕಿದ್ದು ಸಾಕು. ಮುಂದೆ ಏನು ಮಾಡಬೇಕು ಅಂತ ಯೋಚನೆ ಮಾಡೋಣ’ ಎಂದು ಹೇಳಿದ್ದಾರೆ.|
ವಿಷ್ಣು ಸಮಾಧಿ ಕೆಡವಿದವರಿಗೆ ತಕ್ಕ ಶಿಕ್ಷೆ ಆಗಲಿ; ನಟ ಅನಿರುದ್ಧ:
‘ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ನೆಲಸಮ ಮಾಡಿದ ವಿಷಯ ಗೊತ್ತಾಗಿ ತುಂಬಾ ನೋವಾಯಿತು. ಸಮಾಧಿ ಒಡೆಸಿದವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು’ ಎಂದು ಡಾ.ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಹೇಳಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಮಾಧಿ ಕೆಡವಿದ್ದು ದೊಡ್ಡ ಅನ್ಯಾಯ ಮತ್ತು ದುರಂತ. ಘಟನೆ ತಿಳಿದು ಭಾರತಿ ವಿಷ್ಣುವರ್ಧನ್ ತುಂಬಾ ನೊಂದುಕೊಂಡಿದ್ದಾರೆ. ಇದರ ಹಿಂದೆ ಯಾರೇ ಇರಲಿ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಅವರ ಪುಣ್ಯಭೂಮಿ ಜಾಗದ ಜೊತೆ ಭಾವನಾತ್ಮಕ ನಂಟು ಇತ್ತು. ಆದರೆ, ಈಗ ಅದೇ ಜಾಗ ಇಲ್ಲ ಅಂದರೆ ಹೇಗೆ’ ಎಂದು ನೋವು ತೋಡಿಕೊಂಡರು.
ಈ ಮಧ್ಯೆ ಕೆಲವರ ವಿರುದ್ಧ ಕಿಡಿಕಾರಿರುವ ಅವರು, ‘ಪುಣ್ಯಭೂಮಿ ಉಳಿಸಿಕೊಡಿ. ಅಭಿಮಾನಿಗಳು ಬಂದು ಹೋಗುವುದಕ್ಕೆ ಅವಕಾಶ ಕೊಡಿ ಎಂದು ನಾನೇ ಬಾಲಣ್ಣ ಕುಟುಂಬಕ್ಕೆ ಮನವಿ ಮಾಡಿಕೊಂಡಿದ್ದೆ. ಆದರೆ, ಪುಣ್ಯಭೂಮಿ ಉಳಿಸುವ ನಮ್ಮ ಹೋರಾಟ ಯಾರಿಗೂ ಅರ್ಥ ಆಗಿಲ್ಲ. ಹೀಗಾಗಿ ಪುಣ್ಯಭೂಮಿ ವಿಚಾರದಲ್ಲಿ ನಮ್ಮ ವಿರುದ್ಧ ಕೆಲವರು ಆರೋಪ ಮಾಡಿ ಹೀರೋಗಳಾಗಲು ಹೊರಟಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡುವ ಅಂಥ ಕೆಲ ಅಭಿಮಾನಿಗಳ ಜೊತೆ ನಾವು ಸೇರಲ್ಲ. ಅವರು ನಮ್ಮ ಕುಟುಂಬ ಮತ್ತು ಅಭಿಮಾನಿಗಳ ಮಧ್ಯೆ ಅಂತರ ಸೃಷ್ಟಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅವರನ್ನು ಮಣ್ಣು ಮಾಡಿಲ್ಲ. ಅದು ಅವರ ಪಾರ್ಥಿವ ಶರೀರವನ್ನು ದಹನ ಮಾಡಿರುವ ಜಾಗ. ಹೀಗಾಗಿ ವಿಷ್ಣು ಅವರ ಅಸ್ಥಿಯನ್ನು ವಿಧಿವಿಧಾನಗಳ ಪ್ರಕಾರ ಅವತ್ತೇ ಕಲಶದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಎತ್ತಿಟ್ಟಿದ್ದರು. ಆ ಕಲಶದಲ್ಲಿದ್ದ ಅಸ್ಥಿಯನ್ನು ಮೈಸೂರಿನಲ್ಲಿ ಪ್ರತಿಷ್ಠಾಪನೆ ಮಾಡಿದ್ದೇವೆ. ಅಲ್ಲೊಂದು ಅದ್ದೂರಿಯಾದ ಸ್ಮಾರಕ ಮಾಡಿದ್ದೇವೆ. ಇದು ಯಾರಿಗೂ ಅರ್ಥ ಆಗುತ್ತಿಲ್ಲ ಯಾಕೆ?’ ಎಂದು ಅನಿರುದ್ಧ್ ಪ್ರಶ್ನಿಸಿದರು.
‘ಅಭಿಮಾನ್ ಸ್ಟುಡಿಯೋ ಆಸ್ತಿ ವಿವಾದ 2004ರಿಂದಲೇ ಶುರುವಾಗಿ ಕೋರ್ಟ್‌ನಲ್ಲಿತ್ತು. 2009ರಲ್ಲಿ ವಿಷ್ಣು ಅವರನ್ನು ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ವಿಷ್ಣು ಅವರ ಅಂತ್ಯಸಂಸ್ಕಾರವನ್ನು ಚಾಮರಾಜಪೇಟೆಯಲ್ಲಿ ಮಾಡುವುದಾಗಿ ನಾನೇ ಆಗ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಹೇಳಿದ್ದೆ. ಅವರು ಡಾ.ವಿಷ್ಣುವರ್ಧನ್ ಮೇರು ನಟ. ಅಂಥವರನ್ನು ಅಲ್ಲೆಲ್ಲೋ ಅಂತ್ಯಸಂಸ್ಕಾರ ಮಾಡೋದು ಬೇಡ ಅಂತ ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಕೊಟ್ಟರು. ಆದರೆ, ಆ ಜಾಗ ವಿವಾದದಲ್ಲಿದೆ ಅಂತ ನಮಗೆ ಗೊತ್ತಿದ್ದರೆ ನಾವು ಅಲ್ಲಿ ಅಂತ್ಯಸಂಸ್ಕಾರ ಮಾಡುತ್ತಿರಲಿಲ್ಲ’ ಎಂದು ಅವರು ತಿಳಿಸಿದರು.
ಮಾಲ್ ಕಟ್ಟಲು ವಿಷ್ಣು ಸಮಾಧಿ ನೆಲಸಮ;
ಬಾಲಣ್ಣ ಪುತ್ರಿ ಗೀತಾ:ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವ ಕುರಿತು ಹಿರಿಯ ನಟ ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ‘ಇಷ್ಟೆಲ್ಲ ಸಮಸ್ಯೆ ಆಗಿರುವುದು ನನ್ನ ಕೊನೆಯ ಸೋದರ ಕಾರ್ತಿಕ್‌ನಿಂದ’ ಎಂದು ಆರೋಪ ಮಾಡಿದ್ದಾರೆ.‘ಸ್ಟುಡಿಯೋ ಜಾಗಕ್ಕೆ ಸಂಬಂಧಿಸಿ ನಾನು 2004ರಲ್ಲೇ ಕೇಸು ದಾಖಲಿಸಿದ್ದೆ. ವಿಷ್ಣುವರ್ಧನ್ ಸಮಾಧಿ ಬಂದಾಗ ಸ್ಟುಡಿಯೋದಲ್ಲಿ 2 ಎಕರೆ ಜಾಗವನ್ನು ಭಾರತಿ ವಿಷ್ಣುವರ್ಧನ್ ಅಥವಾ ವಿಷ್ಣು ಅವರ ಟ್ರಸ್ಟ್‌ಗೆ ಕೊಡುತ್ತೇನೆಂದು ಆಗಲೇ ನಾನು ಹೇಳಿದ್ದೆ. ನನ್ನನ್ನೂ ಸೇರಿ ಜಾಗದಲ್ಲಿ ನಾವು ನಾಲ್ಕು ಜನ ಮಕ್ಕಳಿಗೆ ಹಕ್ಕು ಇದೆ. ಆದರೆ, ವಿಷ್ಣುವರ್ಧನ್ ಅವರ ಸಮಾಧಿಯನ್ನು ಯಾರಿಗೂ ತಿಳಿಸದೆ ಹೀಗೆ ತೆರವು ಮಾಡಬಾರದಿತ್ತು’ ಎಂದು ಗೀತಾ ಹೇಳಿದ್ದಾರೆ.
‘ಈಗ ನನ್ನ ಇಬ್ಬರು ತಮ್ಮಂದಿರು ಇಲ್ಲ. ಈಗಿರುವ ನನ್ನ ಕೊನೆಯ ತಮ್ಮ ಕಾರ್ತಿಕ್‌ನಿಂದಲೇ ಇದೆಲ್ಲ ಆಗುತ್ತಿದೆ. ನಮ್ಮ ತಂದೆ- ತಾಯಿ ನಿಧನರಾದ ಮೇಲೆ ನಮ್ಮ ಒಡಹುಟ್ಟಿದ ಸಂಬಂಧ ಮುಗಿಯಿತು. ನನಗೆ ಯಾರ ಜೊತೆಗೂ ಒಡನಾಟ ಇಲ್ಲ. ಈಗ ಆಗಿರುವ ಬೆಳವಣಿಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಕಾರ್ತಿಕ್‌ಗೆ ರಾಜಕಾರಣಿಗಳ ಪರಿಚಯ ಇದೆ. ನನಗೆ ಎಲ್ಲದರ ಬಗ್ಗೆ ಮಾಹಿತಿ ಇದೆ. ನಾನೂ ಕಾನೂನು ಮೂಲಕ ಹೋರಾಟ ಮಾಡುತ್ತಿದ್ದೇನೆ. ನನ್ನ ಜೀವಕ್ಕೂ ಅಪಾಯ ಇದೆ. ಅಭಿಮಾನ್ ಸ್ಟುಡಿಯೋದಲ್ಲಿ ಮಾಲ್ ಕಟ್ಟಲು ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದಾರೆ’ ಎಂದು ಗೀತಾ ಬಾಲಕೃಷ್ಣ ಆರೋಪಿಸಿದ್ದಾರೆ.ಕೋಟ್ಸ್...
ಬಹಳ ನೋವಾಗಿದೆ‘ಮನಸ್ಸಿಗೆ ಬಹಳಷ್ಟು ನೋವಾಗಿದೆ. ನಾನು ಒಬ್ಬ ಕನ್ನಡಿಗನಾಗಿ, ಒಬ್ಬ ಕಲಾವಿದನಾಗಿ ವಿಷ್ಣು ಅವರ ಅಭಿಮಾನಿಗಳ ಜತೆ ಪ್ರಾಮಾಣಿಕವಾಗಿ ಇದ್ದೇನೆ’
- ಧೃವ ಸರ್ಜಾ, ನಟ
===========
ವಿಷ್ಣುರ ಹೆಸರು ಬೆಳೆಸಬೇಕು
‘ಮೈಸೂರಿನಲ್ಲಿ ಇರುವ ವಿಷ್ಣು ಸ್ಮಾರಕದ ಬಳಿ ಅತ್ಯುತ್ತಮ ಕೆಲಸಗಳನ್ನು ಮಾಡಬೇಕು. ವಿಷ್ಣು ಅವರು ಎಲ್ಲೇ ಇದ್ದರೂ ಅವರನ್ನ ಗೌರವಿಸಬೇಕಾಗುತ್ತದೆ. ನಾವು ವಿಷ್ಣುವರ್ಧನ್ ಅವರ ಹೆಸರನ್ನು ಮತ್ತೆ ಮತ್ತೆ ಎಳೆದು ತರುವ ಬದಲು, ಅವರ ಹೆಸರನ್ನು ಬೆಳೆಸುವ ಕೆಲಸಕ್ಕೆ ಮುಂದಾಗಬೇಕು’.
- ತರುಣ್ ಸುಧೀರ್, ನಿರ್ದೇಶಕ
===========
ಸ್ಮಾರಕಕ್ಕೆ ನಾನೇ ಜಾಗ ಕೊಡ್ತಿದೆ
‘ನಾವು ಪ್ರತೀ ವರ್ಷ ಆ ಜಾಗಕ್ಕೆ ಹೋಗ್ತಿದ್ವಿ. ಪುಣ್ಯಭೂಮಿ ಜಾಗಕ್ಕೂ ನಮಗೂ ಭಾವನಾತ್ಮಕ ಸಂಬಂಧ ಇತ್ತು. ಕಾನೂನು ಹೋರಾಟ ನಡೆಯುತ್ತಿರುವುದರಿಂದ ನಾವು ಏನೂ ಮಾಡೋಕಾಗಲಿಲ್ಲ. ಇಷ್ಟೊಂದು ಗೊಂದಲ ಆಗುತ್ತೆ ಅಂತ ಗೊತ್ತಿದ್ದರೆ, ನಾನು ಬೇಕಿದ್ದರೆ ನನ್ನ ಜಮೀನಿನಲ್ಲಿ ಜಾಗ ಕೊಡುತ್ತಿದ್ದೆ. ಈಗ ಆಗಿರುವ ಸಮಸ್ಯೆಗೆ ಹೋರಾಟದಿಂದ ಸರಿ ಆಗುತ್ತದೆ ಎಂದರೆ ನಾವೆಲ್ಲ ಹೋರಾಟಕ್ಕೆ ಬರಲು ರೆಡಿ.
- ಶ್ರುತಿ, ನಟಿ
====
ನಂಬಿಕೆ ಸುಳ್ಳಾಗಿದೆ
‘ವಿಷ್ಣುವರ್ಧನ್ ಸಮಾಧಿ ತೆರವುಗೊಳಿಸಿರುವುದು ಅತ್ಯಂತ ನೋವಿನ ವಿಚಾರ. ಪುಣ್ಯಭೂಮಿ ಜಾಗದ ವಿವಾದಕ್ಕೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ, ಈಗ ನಂಬಿಕೆ ಸುಳ್ಳಾಗಿದೆ. ಅವರ ಸಮಾಧಿಯನ್ನೇ ನೆಲಸಮ ಮಾಡಿದ್ದಾರೆ. ನನ್ನ ಮನಸ್ಸಿಗೆ ನೋವಾಗಿದೆ.
- ಸುಧಾರಾಣಿ, ನಟಿ
======
ವಿಷ್ಣುಗೆ ಅಗೌರವ
ಡಾ. ವಿಷ್ಣುವರ್ಧನ್‌ರ ಸ್ಮಾರಕದ ವಿಚಾರದಲ್ಲಿ ನಡೆದಿರುವುದು ಖಂಡನೀಯ. ಅವರನ್ನು ಹೃದಯಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟು ಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಅಗೌರವ ತಂದಂತಾಗಿದೆ.
- ರಿಷಭ್ ಶೆಟ್ಟಿ, ನಟ