ಸಾರಾಂಶ
ಸಂಸದರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ₹೧.೮೩ ಕೋಟಿ ಅನುದಾನ ಒದಗಿಸಿರುವೆ.
ಸಂಡೂರು: ಶಾಸಕ ಈ.ತುಕಾರಾಂ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಲೇಬೇಕು. ಕ್ಷೇತ್ರದಿಂದ ಪಕ್ಷದ ಬಾವುಟ ಹಾರಿಸುವ ನಂಬಿಕೆ ಇದೆ. ಪಕ್ಷ ಅವಕಾಶ ಕಲ್ಪಿಸಿದರೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾವು ಲೋಕಸಭೆ ಚುನಾವಣೆ ಎದುರಿಸಿದಾಗ ಸಂಡೂರು ಕ್ಷೇತ್ರದಲ್ಲಿ ತಮ್ಮ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ಇದ್ದ ಮತಗಳ ಅಂತರ ಕೇವಲ ೧೩೮೪ ಮಾತ್ರ. ತಾವು ಸಂಸದರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ₹೧.೮೩ ಕೋಟಿ ಅನುದಾನ ಒದಗಿಸಿರುವೆ. ಕಾರ್ತಿಕೇಯ ಘೋರ್ಪಡೆಯವರ ಪ್ರಮುಖ ಗುರಿಯಾದ ತಾಲೂಕಿನಲ್ಲಿಯ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಕುರಿತು ಡಿಪಿಆರ್ ಮಾಡಿಸಲಾಗಿತ್ತು. ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಕಾರ್ಯ ನನೆಗುದಿಗೆ ಬಿದ್ದಿದೆ ಎಂದರು. ಡಿಎಂಎಫ್ (ಜಿಲ್ಲಾ ಖನಿಜ ನಿಧಿ)ಯಲ್ಲಿ ಸಂಡೂರು ಕ್ಷೇತ್ರಕ್ಕೆ ಶೇ.೭೮ ದೊರಕಲಿದೆ. ಈ ಹಣದಿಂದಲೇ ನಾವು ಇಲ್ಲಿನ ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸಬಹುದಾಗಿದೆ ಎಂದು ಹೇಳಿದರು.ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಕೇಳಿ ಬರುತ್ತಿರುವ ಒತ್ತಾಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೈ. ದೇವೇಂದ್ರಪ್ಪ, ನಾನು ೫ ವರ್ಷದಿಂದ ಕ್ಷೇತ್ರದಲ್ಲಿದ್ದೇನೆ. ನನ್ನ ನಾಲ್ವರು ಮೊಮ್ಮಕ್ಕಳು ಇಲ್ಲಿಯೇ ಓದುತ್ತಿದ್ದಾರೆ. ನಾನು ಸ್ಥಳೀಯ ವ್ಯಕ್ತಿಯೇ ಎಂದರು.
ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದೇನೆ. ಹಲವರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಮುಖಂಡರು ಉತ್ತಮ ಅಭ್ಯರ್ಥಿ ಸೂಚಿಸಬೇಕಿದೆ. ಹಿಂದಿನ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಂಡಾಯದಿಂದಾಗಿ ಸೋಲಿನ ಅನುಭವವಾಗಿದೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ನೋವು ಅನುಭವಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸಲಾಗವುದು. ಪಕ್ಷ ಯಾರಿಗೇ ಟಿಕೆಟ್ ನೀಡಲಿ, ಅವರನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಶ್ರಮಿಸುವೆವು ಎಂದರು.ಪಕ್ಷದ ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ದರೋಜಿ ರಮೇಶ್, ರಮೇಶ್, ಪುರುಷೋತ್ತಮ್, ಪ್ರಭುಗೌಡ, ಕೆ.ಹರೀಶ್, ನರಸಿಂಹ, ಚಿರಂಜೀವಿ ಹಾಗೂ ರವಿಕಾಂತ್ ಭೋಸ್ಲೆ ಉಪಸ್ಥಿತರಿದ್ದರು.