ರೈತರಿಗೆ ಬೀಜ,ಗೊಬ್ಬರ ವಿತರಣೆಗೆ ಸಿದ್ಧ

| Published : May 22 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಪ್ರಸಕ್ತ ಮುಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಮುಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಜಿಲ್ಲೆಯ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವವಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗಬಾರದು. ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ವಿತರಣೆ ಹಾಗೂ ದಾಸ್ತಾನು ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದರು.

ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಗೊಬ್ಬರ ಮತ್ತು ಬೀಜದ ಕೃತಕ ಅಭಾವ ಸೃಷ್ಟಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕೃಷಿ ಮಾರಾಟ ಕೇಂದ್ರಗಳಿಗೆ ವಿಚಕ್ಷಣಾ ಅಧಿಕಾರಿಗಳ ತಂಡ ನಿರಂತರವಾಗಿ ಭೇಟಿ ನೀಡುವಂತೆ ಜಂಟಿ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬ ಅಭಾವವಾಗದಂತೆ ನೋಡಿಕೊಳ್ಳಬೇಕು. ಕೃಷಿ ಮಾರಾಟ ಕೇಂದ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಕಳಪೆ ಬೀಜ, ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಕಂಡುಬಂದಲ್ಲಿ ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಅಲ್ಲದೇ, ಗುರಿಗಿಂತ ಹೆಚ್ಚಿನ ಸಮಯ ವೀಚಕ್ಷಣಾ ತಂಡ ಭೇಟಿ ನೀಡಿ ಪರಿಶೀಲಿಸಬೇಕು, ಮಾರಾಟ ಕೇಂದ್ರಗಳು ಇಲಾಖೆಯ ಮಾನದಂಡಗಳ ಪ್ರಕಾರ ನಡೆಯುವಂತೆ ನೋಡಿಕೊಳ್ಳುವಂತೆ ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತೆ ಹೆಚ್ಚಿನ ಮಳೆಯಾಗಿದೆ. ಮುಂಗಾರು ಹಂಗಾಮಿಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ 2.82 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ತೊಗರಿ, ಉದ್ದು, ಹೆಸರು, ಸೋಯಾ, ಅವರೆ, ಜೋಳ ಸೇರಿದಂತೆ ಒಟ್ಟು 24658 ಕ್ವಿಂಟಲ್ ಬೀಜಗಳ ಬೇಕಾಗಿದೆ. ಈ ಪೈಕಿ 18 ಸಾವಿರ ಕ್ವಿಂಟಾಲ್‌ ದಾಸ್ತಾನು ಇದೆ. ಯೂರಿಯಾ 34,795 ಮೆ.ಟನ್, ಡಿಎಪಿ 6302 ಮೆ.ಟನ್, ಕಾಂಪ್ಲೇಕ್ಸ್ 19,388 ಮೆ.ಟನ್, ಎಂಒಪಿ 2546 ಹಾಗೂ ಎಸ್ಎಸ್‌ಪಿ 1641 ಟನ್ ಸೇರಿ ಒಟ್ಟು 71,153 ಮೆ.ಟನ್ ಗೊಬ್ಬರ ಲಭ್ಯವಿರುವುದಾಗಿ ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 18 ರೈತ ಸಂಪರ್ಕ ಕೇಂದ್ರಗಳು, ಬೀಜ ಕೃಷಿ ಪರಿಕರ ಮಳಿಗೆ 303, ಕೀಟನಾಶಕ ಕೃಷಿ ಪರಿಕರ ಮಳಿಗೆ 536, ರಸಗೊಬ್ಬರ ಮಳಿಗೆ(ರಿಟೇಲರ್‌) 495, ಹೋಲಸೇಲ್ 76 ಮಳಿಗೆಗಳಿವೆ. ಚಿಕ್ಕಲಕಿ ಕ್ರಾಸ್, ಗೋಠೆ, ಜಮಖಂಡಿ ಹಾಗೂ ಮುಧೋಳದಲ್ಲಿ ತಲಾ ಒಂದರಂತೆ ಹೆಚ್ಚುವರಿ 4 ಬಿತ್ತನೆ ಬೀಜ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಪಿ.ಸುಂಕದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ, ಕೃಷಿ ಉಪ ನಿರ್ದೇಶಕ ಎಂ.ಆರ್.ನಾಗೂರ, ಕೆ.ಎಸ್.ಅಗಸನಾಳ, ಜಿಲ್ಲಾ ಕೃಷಿ ಮಾರಾಟ ಸಂಘದ ವಿಜಯ ವಾಲಿ, ರೈಲ್ವೆ ಇಲಾಖೆಯ ಮುಖ್ಯ ಸರಕು ವ್ಯವಸ್ಥಾಪಕ ಹನಮಂತ ದಾಸರ, ಜಿಲ್ಲಾ ಅಗ್ರಣಿಯ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ ಹೂಗಾರ ಸೇರಿದಂತೆ ಸಹಕಾರಿ, ಖಾಸಗಿ ಬೀಜೋತ್ಪಾದನ ಸಂಸ್ಥೆ, ರಸಗೊಬ್ಬರ ಉತ್ಪಾದನ ಸಂಸ್ಥೆಯ ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.(ಫೋಟೊ 21ಬಿಕೆಟಿ5, ಮಂಗಳವಾರ ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ)

----------

ಕೋಟ್‌ಜಿಲ್ಲೆಗೆ ಪೂರೈಕೆಯಾದ ಬೀಜ, ರಸಗೊಬ್ಬರ ಬೇರೆ ಜಿಲ್ಲೆಗೆ ಹೋಗದಂತೆ ಅಧಿಕಾರಿಗಳು ಗಮನಹರಿಸಬೇಕು. ಬಿತ್ತನೆ ಬೀಜಗಳ ಪ್ಯಾಕ್ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ತಾವು ಪಡೆದ ಬೀಜಕ್ಕೆ ರೈತರು ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು.

- ಜಾನಕಿ.ಕೆ.ಎಂ, ಜಿಲ್ಲಾಧಿಕಾರಿ

-----

ಜಿಲ್ಲೆಯಲ್ಲಿ 2.82 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ತೊಗರಿ, ಉದ್ದು, ಹೆಸರು, ಸೋಯಾ, ಅವರೆ, ಜೋಳ ಸೇರಿದಂತೆ ಒಟ್ಟು 24658 ಕ್ವಿಂಟಲ್ ಬೀಜಗಳ ಬೇಕಾಗಿದೆ. ಈ ಪೈಕಿ 18 ಸಾವಿರ ಕ್ವಿಂಟಾಲ್‌ ದಾಸ್ತಾನು ಇದೆ. ಯೂರಿಯಾ 34,795 ಮೆ.ಟನ್, ಡಿಎಪಿ 6302 ಮೆ.ಟನ್, ಕಾಂಪ್ಲೇಕ್ಸ್ 19,388 ಮೆ.ಟನ್, ಎಂಒಪಿ 2546 ಹಾಗೂ ಎಸ್ಎಸ್‌ಪಿ 1641 ಟನ್ ಸೇರಿ ಒಟ್ಟು 71,153 ಮೆ.ಟನ್ ಗೊಬ್ಬರ ಲಭ್ಯವಿದೆ.

- ಲಕ್ಷ್ಮಣ ಕಳ್ಳೇನ್ನವರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ