ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು. ಆದರೆ, ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನೂ ಅನುಸರಿಸಲಿಲ್ಲ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲು ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ ಮಾಡಿರುವ 2022 ರ ಕಾಯ್ದೆಯನ್ನು ಶೆಡ್ಯೂಲ್ 9 ಗೆ ಸೇರಿಸಲು ಆಗ್ರಹಿಸಿ ಯಾವುದೇ ಸ್ವರೂಪದ ಹೋರಾಟಕ್ಕೂ ವಾಲ್ಮೀಕಿ ನಾಯಕ ಸಮಾಜ ಸಿದ್ಧ ಎಂದು ಮಾಜಿ ಸಂಸದ, ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಕೇಂದ್ರ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು. ಆದರೆ, ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನೂ ಅನುಸರಿಸಲಿಲ್ಲ ಎಂದು ಆರೋಪಿಸಿದರು.

ಬೊಮ್ಮಾಯಿ ಅವರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದರೂ ಶೇ.56 ಮೀಸಲನ್ನು ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಿ, ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸಲು ಮುತುವರ್ಜಿ ವಹಿಸಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಸಹ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬರೀ ಮುಂದೂಡುವ ಕೆಲಸವಷ್ಟೇ ಆಯಿತು ಎಂದು ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.

2022 ರ ಕಾಯ್ದೆಯನ್ನು ಭಾರತದ ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಲು ಮತ್ತು ಅನುಚ್ಛೇದ 15 ಮತ್ತು 16ಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ಅವರು ಹೇಳಿದರು. ಹಾಗೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗೆಲ್ಲ ಕೆಲ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದರು. ಇದರಿಂದ ಇಂದು ಸಾಕಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರೇ ಕಾರಣ ಎಂದು ಉಗ್ರಪ್ಪ ಆರೋಪಿಸಿದರು.

ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು. ಜೂನ್ ವೇಳೆಗೆ ರಾಜ್ಯ ಸರ್ಕಾರ ನಿಯೋಗ ತೆರಳದಿದ್ದರೆ ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಯುವಹಳ್ಳಿ ರಮೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಲಾಯರ್ ನಾರಾಯಣಸ್ವಾಮಿ, ಮುಖಂಡರಾದ ಎಂ. ನರಸಿಂಹಯ್ಯ, ರಾಜಪ್ಪ, ಬಾಬಣ್ಣ, ಜಿ. ಹನುಮಂತರಾಯಪ್ಪ, ಮೂರ್ತಿ, ಗವಿರಾಯಪ್ಪ, ಎಸ್.ಎನ್. ಅಶ್ವತ್ಥನಾರಾಯಣ್, ನರೇಂದ್ರ, ವಕೀಲ ಮಠಮಪ್ಪ, ನರಸಿಂಹರಾಜು ಮತ್ತಿತರರು ಇದ್ದರು.

ಬಾಕ್ಸ್‌...ಕುಲಶಾಸ್ತ್ರ ಅಧ್ಯಯನ ನಡೆಯಲಿಕುರುಬ, ಗೊಲ್ಲ, ಕೋಳಿ ಸಮುದಾಯ ಸೇರಿ ಅನೇಕ ಸಮುದಾಯಗಳನ್ನು ಎಸ್ಟಿಗೆ ಸೇರಿಸುವ ಕುರಿತು ಸರ್ಕಾರಕ್ಕೆ ಮನವಿ ಮಾಡಿದೆ. ಅರ್ಹತೆಯಿರುವ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ನಮ್ಮದು ಯಾವ ಅಭ್ಯಂತರವಿಲ್ಲ. ಆದರೆ, ಆಯಾ ಸಮುದಾಯದ ಕುಲಶಾಸ್ತ್ರ ಅಧ್ಯಯನ ಆಗಬೇಕು. ನಾವು ಮೊದಲಿನಿಂದಲೂ ಬದುಕಿನಲ್ಲಿ ಸಂಘರ್ಷ ಮಾಡಿಕೊಂಡೇ ಬಂದವರು. ನಾಯಕರು ಕೇವಲ ಸುದ್ದಿಗೋಷ್ಠಿ ನಡೆಸಿ ಸುಮ್ಮನಾಗುತ್ತಾರೆ ಎಂದು ಭಾವಿಸಬೇಡಿ. ಕೇಂದ್ರ ಸರ್ಕಾರ ಹೀಗೆ ನಿರ್ಲಕ್ಷ್ಯಧೋರಣೆ ತಾಳಿದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ನಮ್ಮ ಸಮುದಾಯದ ಇತರ ನಾಯಕರು ಕೂಡ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಇದ್ದಾರೆ. ನೀವು ಗೆದ್ದಿರುವುದು ಮೀಸಲಾತಿಯಿಂದ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಸಮುದಾಯದ ಹಿತದೃಷ್ಟಿಯಿಂದ ನಿಮ್ಮನ್ನು ಬೆಳೆಸಿದ ಸಮುದಾಯದ ಪರ ಧ್ವನಿ ಎತ್ತಿ ಎಂದು ಉಗ್ರಪ್ಪ ಆಗ್ರಹಿಸಿದರು.

ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ವಿ.ಎಸ್. ಉಗ್ರಪ್ಪ ಮಾತನಾಡಿದರು