ಸಾರಾಂಶ
ಭೀಮರಾಯನ ಗುಡಿಯ ಕೆಬಿಜೆಎನ್ ಎಲ್ ಆಡಳಿತ ಕಚೇರಿ ಮುಂದೆ ಕಳೆದ 14 ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಧರಣಿ ಮುಂದುವರೆದಿದೆ.
ಕನ್ನಡಪ್ರಭ ವಾರ್ತೆ ಶಹಾಪುರ
ಬೆಳೆದು ನಿಂತ ಮೆಣಸಿನಕಾಯಿ ಬೆಳೆಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಭೀಮರಾಯನ ಗುಡಿಯ ಕೆಬಿಜೆಎನ್ ಎಲ್ ಆಡಳಿತ ಕಚೇರಿ ಮುಂದೆ ಕಳೆದ 14 ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಧರಣಿ ಮುಂದುವರೆದಿದೆ. ನೀರು ಬರುವವರಿಗೆ ಧರಿಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಬಿಗಿಪಟ್ಟು ಹಿಡಿದಿದ್ದಾರೆ.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ್, ಕಳೆದ 14 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೂ ರೈತರ ಸಮಸ್ಯೆಗೆ ಪರಿಹಾರ ಸಿಗದೇ ಇರುವುದು ಇದೊಂದು ದೊಡ್ಡ ದುರಂತವೇ ಸರಿ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಾಪಸ್ ಗಾಗಿ ರೈತರು ಒಂದು ವರ್ಷದವರೆಗೆ ದೆಹಲಿಯಲ್ಲಿ ಆಹೋರಾತ್ರಿ ಧರಣಿ ನಡೆಸಿದ್ದು ಇತಿಹಾಸವಾಗಿದೆ. ಅದರಂತೆ ಇಲ್ಲಿ ನಾವು 14 ದಿನಗಳಿಂದ ಮೆಣಸಿನಕಾಯಿ ಬೆಳೆಗೆ ನೀರು ಬಿಡುವಂತೆ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ನೀರು ಬಿಡುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಇನ್ನು ಒಂದೆರಡು ದಿನ ನೋಡುತ್ತೇವೆ. ನಂತರ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇವೆ. ನೀರಿಗಾಗಿ ಪ್ರಾಣ ಕೊಡಲು ಸಿದ್ಧ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಗೌಡ ಸುಬೇದಾರ್, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಸಿದ್ದಣ್ಣ, ಬೀರಪ್ಪ, ಮಲ್ಲಪ್ಪ, ಕಲ್ಲಪ್ಪ, ಶರಣಪ್ಪ, ಚಂದಪ್ಪ, ಶಾಂತಪ್ಪ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.