ಪತ್ರಕರ್ತರಿಗೆ ಸವಲತ್ತು ನೀಡಲು ಸಿದ್ಧ: ಶಾಸಕ ಶಿವಲಿಂಗೇಗೌಡ

| Published : Feb 11 2024, 01:48 AM IST

ಪತ್ರಕರ್ತರಿಗೆ ಸವಲತ್ತು ನೀಡಲು ಸಿದ್ಧ: ಶಾಸಕ ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರ ಭವನ ಸೇರಿದಂತೆ ಮಾಧ್ಯಮ ಮಿತ್ರರಿಗೆ ಸರ್ಕಾರದಿಂದ ದೊರೆಯುವ ಪ್ರತಿಯೊಂದು ಸೌಲತ್ತುಗಳನ್ನು ದೊರಕಿಸಿ ಕೊಡುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು. ಪತ್ರಕರ್ತರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಅಭಿನಂದನಾ ಸಮಾರಂಭ

ಅರಸೀಕೆರೆ: ಪತ್ರಕರ್ತರ ಭವನ ಸೇರಿದಂತೆ ಮಾಧ್ಯಮ ಮಿತ್ರರಿಗೆ ಸರ್ಕಾರದಿಂದ ದೊರೆಯುವ ಪ್ರತಿಯೊಂದು ಸೌಲತ್ತುಗಳನ್ನು ದೊರಕಿಸಿ ಕೊಡುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.

ಎರಡನೇ ಬಾರಿಗೆ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರಾದ ಶಿವಲಿಂಗೇಗೌಡರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನಾ ಸಮಾರಂಭವನ್ನು ಪತ್ರಕರ್ತರ ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿ, ನಗರದಲ್ಲಿ ಸುಸಜ್ಜಿತವಾದ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.

ಭವನಕ್ಕೆ ಹೊಸ ನಿವೇಶನ ಖರೀದಿ ಅಥವಾ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸಲು ಕಾನೂನಿನಲ್ಲಿ ಇರುವ ಅವಕಾಶ ಕುರಿತು ಸಮಾಲೋಚನೆ ನಡೆಸಿ ಭವನ ನಿರ್ಮಾಣಕ್ಕೆ ಮುಂದಾಗೋಣ ಎಂದು ಹೇಳಿದರು.

ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪತ್ರಕರ್ತರ ಭವನವಿದೆ. ಆದರೆ ಅರಸೀಕೆರೆಯಲ್ಲಿ ಇನ್ನೂ ಭವನ ನಿರ್ಮಾಣ ಆಗದೇ ಇರುವುದು ವಿಷಾದದ ಸಂಗತಿಯಾಗಿದ್ದು ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಬೆಳೆದಿರುವ ಶಿವಲಿಂಗೇಗೌಡರಿಂದ ಪತ್ರಕರ್ತರ ಭವನ ನಿರ್ಮಾಣ ಅಸಾಧ್ಯದ ಮಾತಲ್ಲ. ಪತ್ರಕರ್ತರ ಭವನ ನಿರ್ಮಾಣದ ವಿಷಯದಲ್ಲಿ ಸಹೋದ್ಯೋಗಿ ಮಾಧ್ಯಮ ಮಿತ್ರರು ತಮ್ಮೊಟ್ಟಿಗೆ ಸದಾ ಇರುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ವಿಷಯದಲ್ಲಿ ಅನುಮಾನ ಬೇಡ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಟಿ ಆನಂದ್, ಪಿ. ಶಾಂತಕುಮಾರ್, ಹಿರಿಯ ಪತ್ರಕರ್ತರಾದ ಎಚ್.ಡಿ. ಸೀತಾರಾಮ್, ಜಾವಗಲ್ ನರಸಿಂಹಸ್ವಾಮಿ, ಆನಂದ್ ಕೌಶಿಕ್ ಮಾತನಾಡಿದರು. ಮಾಜಿ ಅಧ್ಯಕ್ಷ ರಾಮಚಂದ್ರ, ಸಂಘದ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್, ಉಪಾಧ್ಯಕ್ಷ ಹಾರನಹಳ್ಳಿ ನಾಗೇಂದ್ರ, ಕಾರ್ಯದರ್ಶಿ ರಂಗನಾಥ್‌ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.ಎರಡನೇ ಬಾರಿಗೆ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರಾದ ಹಿನ್ನೆಲೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆ ಸ್ಪಿಕರಿಸಿ ಶಾಸಕ ಕೆ,ಎಂ ಶಿವಲಿಂಗೇಗೌಡ ಮಾತನಾಡಿದರು.