ಕಾಡಾನೆ ಹಾವಳಿಯಿಂದ ಮುಕ್ತಿ ಕೊಡದಿದ್ದರೆ ಉಗ್ರ ಹೋರಾಟ

| Published : Dec 05 2023, 01:30 AM IST

ಕಾಡಾನೆ ಹಾವಳಿಯಿಂದ ಮುಕ್ತಿ ಕೊಡದಿದ್ದರೆ ಉಗ್ರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರಿಗೆ ಈಗ ಸಾಲ ಹಾಗೂ ಸುಸ್ತಿ ಸಾಲದ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ. ಕಾಡಾನೆ ಸಮಸ್ಯೆಗಳನ್ನು ಶೀಘ್ರ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಫಸಿ ಕಾಯ್ದೆ ಬಳಸಿ ಬ್ಯಾಂಕುಗಳಿಂದ ಬೆಳೆಗಾರರ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಿಸಬೇಕು ಹಾಗೂ ಕಾಡಾನೆ ಸಮಸ್ಯೆಗಳನ್ನು ಶೀಘ್ರ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈಗಾಗಲೇ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರಿಗೆ ಈಗ ಸಾಲ ಹಾಗೂ ಸುಸ್ತಿ ಸಾಲದ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ, ಸರ್ಫೆಸಿ ಕಾಯ್ದೆ ನೆಪದಲ್ಲಿ ಬೆಳೆಗಾರರ ಆಸ್ತಿ ಹರಾಜು ಹಾಕುತ್ತಿರುವ ಬ್ಯಾಂಕ್‌ಗಳ ನೀತಿ ವಿರುದ್ಧ ಹೋರಾಡಲೇ ಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. ಬ್ಯಾಂಕುಗಳು ಅತ್ಯಂತ ಅಮಾನವೀಯವಾಗಿ ಬೆಳೆಗಾರರ ವಿರುದ್ಧ ವಸೂಲಾತಿ/ಹರಾಜು ಕ್ರಮ ಜರುಗಿಸುತ್ತಿವೆ. ಬೆಳೆಗಾರರ ತೋಟಗಳನ್ನು ಕೆಲವೇ ತಿಂಗಳ ನೋಟಿಸ್ ನೀಡಿ ಆನ್‌ಲೈನ್‌ನಲ್ಲಿ ಹರಾಜು ಮಾಡುತ್ತಿವೆ. ಈ ಕುರಿತು ಚಿಕ್ಕಮಗಳೂರಿನ (ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ) ಸಭೆಯಲ್ಲಿ ಚಿಕ್ಕಮಗಳೂರಿನ ಮಾನ್ಯ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದ್ದರೂ ಕೂಡ ಬ್ಯಾಂಕ್‌ಗಳ ಅಧಿಕಾರಿ ವರ್ಗದವರು ಅತ್ಯಂತ ಉದ್ಧಟತನದಿಂದ ಬೆಳೆಗಾರರ ವಿರುದ್ಧ ಕ್ರಮ ಜರುಗಿಸುತ್ತಲೇ ಬಂದಿದ್ದಾರೆ ಎಂದು ದೂರಿದರು.

ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಈವರೆಗೆ ಡಿ.ಎಲ್.ಬಿ.ಸಿ ಸಭೆಯನ್ನೇ ಕರೆಯದೇ ನಿರ್ಲಕ್ಷ್ಯ ತೋರಿದ್ದಾರೆ. ಸಂಸತ್ ಅಧಿವೇಶನದಲ್ಲಿ ಕೇಂದ್ರದ ಹಣಕಾಸು ಸಚಿವರು ಬ್ಯಾಂಕುಗಳಿಗೆ ಕೃಷಿಕರ ವಿರುದ್ಧ ಸಾಲ ವಸೂಲಾತಿಗಾಗಿ ಕಠಿಣ ಕ್ರಮ ಕೈಗೊಳ್ಳದಂತೆ ಸೂಚಿಸಿರುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ದಂಡ ಬಡ್ಡಿ (ಪೀನಲ್ ಇಂಟರೆಸ್ಟ್ ವಿಧಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಕೋವಿಡ್ ಪಿಡುಗಿನ ಸಂದರ್ಭದ ತೀವ್ರವಾದ ಆರ್ಥಿಕ ಹಿಂಜರಿಕೆಯ ನಂತರ ಸತತವಾಗಿ ಕಾಫಿ ನಾಡಿನಲ್ಲಿ ಎರಡು ವರ್ಷ ಅತಿವೃಷ್ಟಿ ಹಾಗೂ ಹಾಲಿ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಎನ್.ಡಿ.ಆರ್.ಎಫ್ ನಿಯಮಾವಳಿಗಳ ಪ್ರಕಾರ ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯದ ವರ್ಷಗಳಲ್ಲಿ ಕೃಷಿಸಾಲಗಳ ಕಂತು ಹಾಗೂ ಬಡ್ಡಿ ಮರುಪಾವತಿಗೆ ಬ್ಯಾಂಕುಗಳು ಕಡ್ಡಾಯವಾಗಿ ವಿನಾಯಿತಿ ನೀಡಬೇಕೆಂಬ ಮಾರ್ಗಸೂಚಿಯಿದ್ದರೂ ಬ್ಯಾಂಕುಗಳು ಇದನ್ನು ಪಾಲಿಸುತ್ತಿಲ್ಲ. ಸಾಲದ ಕುರಿತು ಮೃದುಧೋರಣೆ ಅನುಸರಿಸಬೇಕೆಂದು ಆಗ್ರಹಿಸುತ್ತೇವೆ ಎಂದರು.

ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಇಲ್ಲಿನ ಜನಸಾಮಾನ್ಯರ ಬದುಕು ಚಿಂತಾಜನಕವಾಗಿದೆ. ಕಾಡಾನೆಗಳ ದಾಂಧಲೆಯಿಂದ ಮಾನವ ಪ್ರಾಣಹಾನಿ ಜೊತೆಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವುಂಟಾಗುತ್ತಿದೆ. ಕಾಡಾನೆ ದಾಳಿಯಿಂದ ಉಂಟಾಗುತ್ತಿರುವ ಬೆಳೆನಷ್ಟಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರವೂ ಕೂಡ ಲಭ್ಯವಾಗುತ್ತಿಲ್ಲ. ಕಾಡಾನೆ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರಕಿಸಿಕೊಡಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಸಮಸ್ತ ಕಾಫಿ ಬೆಳೆಗಾರರ ಪರವಾಗಿ ಆಗ್ರಹಿಸುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಉಗ್ರ ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೊರ ಜಿಲ್ಲೆಗಳಿಂದ ಚಿರತೆಗಳನ್ನು ತಂದು ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಿಗೆ ಬಿಡಲಾಗಿದೆ. ಈಗಾಗಲೇ ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ಈ ರೀತಿ ಸ್ಥಳಾಂತರಿಸಿದ ಚಿರತೆಯು ಹಸು ಮತ್ತು ಕರುಗಳನ್ನು ತಿಂದುಹಾಕಿದ್ದು, ಆತಂಕ ಸೃಷ್ಟಿಸಿದೆ. ಈಗಾಗಲೇ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ, ಅಡಕೆ ಮತ್ತು ಭತ್ತದ ಕಟಾವಿನ ಕಾರ್ಯ ಪ್ರಾರಂಭಗೊಂಡಿದ್ದು, ರೈತರು, ಕೂಲಿಕಾರ್ಮಿಕರು ಕೃಷಿ ಜಮೀನುಗಳಿಗೆ ತೆರಳಲು ಭಯಭೀತಗೊಂಡಿರುತ್ತಾರೆ. ಕಾಡಾನೆ ಹಾಗೂ ಕಾಡು ಪ್ರಾಣಿಗಳ ಕುರಿತಾಗಿ ಉಂಟಾದ ಆಗುಹೋಗುಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದರೂ ಇದು ಕಾರ್ಯಗತಗೊಂಡಿರುವುದಿಲ್ಲ. ಹಾಗಾಗಿ ಶೀಘ್ರದಲ್ಲೆ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಉಪಾಧ್ಯಕ್ಷ ನಾಗರಾಜ್, ನಿರ್ದೇಶಕ ಯತೀಶ್, ಇತರರು ಉಪಸ್ಥಿತರಿದ್ದರು.