ಮಂಡ್ಯದಲ್ಲಿ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪಿಸಲು ಉದ್ದೇಶಿಸಿರುವ ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್ ಕಂಪನಿ ಮೊದಲು ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಅರ್ಜಿ ಹಾಕಲಿ. ನಾವು ಭೂಮಿ ಕೊಡುವುದಕ್ಕೆ ಈಗಲೂ ಸಿದ್ಧರಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪಿಸಲು ಉದ್ದೇಶಿಸಿರುವ ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್ ಕಂಪನಿ ಮೊದಲು ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಅರ್ಜಿ ಹಾಕಲಿ. ನಾವು ಭೂಮಿ ಕೊಡುವುದಕ್ಕೆ ಈಗಲೂ ಸಿದ್ಧರಿದ್ದೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಬಳಿ ಕಾಡಾಗೆ ಸೇರಿದ ೮೨ ಎಕರೆ ಭೂಮಿ ಖಾಲಿ ಇದೆ. ಭೂ ಸ್ವಾಧೀನಪಡಿಸಿಕೊಳ್ಳುವ, ಪರಿಹಾರ ನೀಡುವ ಸಮಸ್ಯೆಯೇ ಇಲ್ಲ. ನೇರವಾಗಿ ಜಿಲ್ಲಾಧಿಕಾರಿಗಳಿಂದ ಮಂಜೂರು ಮಾಡಿಸಿಕೊಡಲು ಸಿದ್ಧ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಂಬಂಧಿಸಿದ ಕಂಪನಿಯಿಂದ ಅರ್ಜಿ ಹಾಕಿಸುವಂತೆ ಸಲಹೆ ನೀಡಿದರು.

ಅಧಿಕೃತ ಕಂಪನಿಯೊಂದು ನಿರ್ದಿಷ್ಟ ಉದ್ದೇಶದ ಕೈಗಾರಿಕೆ ಸ್ಥಾಪನೆಗೆ ಅರ್ಜಿಯನ್ನೇ ಸಲ್ಲಿಸದೆ ಭೂಮಿಯನ್ನು ಮಂಜೂರು ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೇ, ಮಂಡ್ಯ ಅಭಿವೃದ್ಧಿ ವಿಷಯದಲ್ಲಿ ನಾವು ಎಂದಿಗೂ ರಾಜಕೀಯ ಮಾಡುವುದಿಲ್ಲ. ರಾಜಕೀಯ ಹೇಳಿಕೆಗಳನ್ನೂ ನೀಡುವುದಿಲ್ಲ. ಕುಮಾರಸ್ವಾಮಿ ಅವರು ಯಾವುದೇ ಕೈಗಾರಿಕೆ ತರಲಿ. ಜಮೀನು ದೊರಕಿಸಿಕೊಡುವುದಕ್ಕೆ ನಾವು ಸಿದ್ಧ ಎಂದು ಸ್ಪಷ್ಟವಾಗಿ ಹೇಳಿದರು.

ಕಂಪನಿ ಅರ್ಜಿ ಹಾಕಿದ ೧೫ ದಿನಗಳಲ್ಲೇ ನಾನು ಸಭೆ ಕರೆಯಲು ಸಿದ್ಧನಿದ್ದೇನೆ. ಜೆಡಿಎಸ್ ಶಾಸಕರೊಂದಿಗೆ ಸಮಾಲೋಚನೆ ನಡೆಸುವುದಕ್ಕೂ ನನಗೆ ಯಾವ ಭಯವೂ ಇಲ್ಲ. ಅರ್ಜಿಯೇ ಬರದಿದ್ದರೆ ಸಭೆ ನಡೆಸಲು ಹೇಗೆ ಸಾಧ್ಯ ಎಂದು ಜೆಡಿಎಸ್ ಮಾಜಿ ಶಾಸಕರ ಪ್ರಶ್ನೆಗೆ ತಿರುಗೇಟು ನೀಡಿದರು.