ಸಾರಾಂಶ
ಹೊಸಪೇಟೆ: ಮಂತ್ರಾಲಯ ಮಠ ಎಂದಿಗೂ ಯಾವ ಮಠದ ವಿರುದ್ಧವೂ ನ್ಯಾಯಾಲಯಗಳಲ್ಲಿ ತಾನಾಗಿಯೇ ದಾವೆ ಹೂಡಿಲ್ಲ. ಪರ ಮಠ ದಾವೆ ಹೂಡಿದಾಗ ನ್ಯಾಯಾಲಯಗಳಲ್ಲಿ ವಾದಿಸಲಾಗಿದೆ. ನವ ಬೃಂದಾವನ, ನರಹರಿತೀರ್ಥರ ಬೃಂದಾವನ ಸೇರಿದಂತೆ ಉಳಿದ ತೀರ್ಥರ ವಿವಾದಗಳನ್ನು ಉಭಯ ಮಠಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಂತ್ರಾಲಯ ಮಠ ಸದಾ ಸಿದ್ಧವಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಹಂಪಿಯ ನರಹರಿತೀರ್ಥರ ಬೃಂದಾವನದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ನಮಗೆ ಕಾನೂನು ಪ್ರಕಾರ ಆರಾಧನೆಗೆ ಅವಕಾಶ ದೊರೆತಿದೆ. ನಮ್ಮ ಮಠವು ಎಂದಿಗೂ ದ್ವೇಷ ಸಾಧಿಸಲ್ಲ. ಪ್ರೀತಿ, ಸಹಬಾಳ್ವೆಯಿಂದಲೇ ಮುನ್ನಡೆಯುತ್ತೇವೆ. ಉಭಯ ಮಠಗಳು ವ್ಯಾಜ್ಯ ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ. ಮಠಗಳನ್ನು ಕೂಡಿಸಿಕೊಂಡು ವ್ಯಾಜ್ಯ ಬಗೆಹರಿಸಿದರೆ ಅದಕ್ಕೂ ಸಿದ್ಧ. ಉನ್ನತ ಮಟ್ಟದ ಸ್ವಾಮೀಜಿಗಳು, ಅಧಿಕಾರಿಗಳು, ಮಾಧ್ಯಮದವರು ಕೂಡ ಗೌರವಯುತವಾಗಿ ವೇದಿಕೆ ಸಿದ್ಧ ಮಾಡಿದರೆ ನಾವು ವ್ಯಾಜ್ಯ ಬಗೆಹರಿಸಿಕೊಳ್ಳಲು ತಯಾರಿದ್ದೇವೆ ಎಂದು ಮಂತ್ರಾಲಯ ಶ್ರೀ ಹೇಳಿದರು.ನವ ಬೃಂದಾವನ, ನರಹರಿತೀರ್ಥರ ಬೃಂದಾವನ ಸೇರಿದಂತೆ ಉಳಿದ ತೀರ್ಥರ ವಿವಾದಗಳನ್ನು ಉಭಯ ಮಠಗಳು ಒಂದೆಡೆ ಸೇರಿ ಸೌಹಾರ್ದವಾಗಿ ಪೂಜೆ ಸಲ್ಲಿಸೋಣ. ಆದರೆ ಪರ ಮಠದವರು ಸೌಹಾರ್ದವಾಗಿ ಪೂಜೆ ಸಲ್ಲಿಸಲು ಬರುತ್ತಿಲ್ಲ. ನರಹರಿತೀರ್ಥರ ಆರಾಧನೆಗೆ ಆಹ್ವಾನಿಸಿದರೂ ಆಗಮಿಸಿಲ್ಲ. ಪರ ಮಠದವರು ಒಪ್ಪುತ್ತಿಲ್ಲ. ಪೂಜೆ, ಆರಾಧನೆಗೆ ನಿರ್ಬಂಧ ಇಲ್ಲ. ಈ ರೀತಿ ವಿವಾದದಿಂದ ಭಕ್ತರು, ಮಠದ ಶಿಷ್ಯರು, ಸಮಾಜದಲ್ಲಿ ಗೊಂದಲ, ಬೇಸರ ಮೂಡುತ್ತದೆ ಎಂದರು.
ನರಹರಿತೀರ್ಥರ ಬೃಂದಾವನದಲ್ಲಿ ಕಳೆದ 26 ವರ್ಷಗಳಿಂದ ನಾವು ಪೂಜೆ ಸಲ್ಲಿಸಿರಲಿಲ್ಲ. ನ್ಯಾಯಾಲಯದಲ್ಲಿ ತೀರ್ಪು ಬಂದ ಬಳಿಕ ಪೂಜೆ ಸಲ್ಲಿಸುತ್ತಿದ್ದೇವೆ. ನಮಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ತೆರವಾಗಿದೆ ಎಂದರು.ಮಂತ್ರಾಲಯ ಶ್ರೀಗಳಿಂದ ಪೂಜೆ: ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಹಿನ್ನೆಲೆ ಹಂಪಿ ನರಹರಿತೀರ್ಥರ ಸನ್ನಿಧಿಯಲ್ಲಿ ಬುಧವಾರ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಿಂದ ಉತ್ತರಾರಾಧಾನೆ ನೆರವೇರಿಸಲಾಯಿತು. ಸುಬುಧೇಂದ್ರ ತೀರ್ಥರು ಬೃಂದಾವನ ಸನ್ನಿಧಿಯಲ್ಲಿ ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.ಶ್ರೀಮಠದ ಪದ್ಧತಿಯಂತೆ ಬೆಳಿಗ್ಗೆ ಪಂಚಾಮೃತಾಭಿಷೇಕ, ಅರ್ಚನೆ, ರಜತ ರೇಷ್ಮೆ, ಹೂವಿನ ಅಲಂಕಾರ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಕಾಡಾ ನಿವೃತ್ತ ಮುಖ್ಯ ಅಭಿಯಂತರ ವಿ.ಪಿ. ಉದ್ಯಾಳ್, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರಹ್ಲಾದ್ ಆಚಾರ್ಯ, ರಾಜಾ ಅಪ್ರಮೇಯಾಚಾರ್ಯ, ಶ್ರೀನಿವಾಸ ರಾವ್ ಕಸಬೆ, ಮಠಾಧಿಕಾರಿಗಳಾದ ಆನಂದ್ ತೀರ್ಥ ಆಚಾರ್ಯ, ರಾಜಾ ಸುಧೀಂದ್ರ ಆಚಾರ್ಯ, ಧೀರೇಂದ್ರ ಆಚಾರ್ಯ, ಅನಿಲ್ ಹಿಂದೂಪುರ, ಡಣಾಪುರ ಶ್ರೀನಿವಾಸ್, ಡಣಾಪುರ ವಿಜಯ್, ಸುಳಾದಿ ಹನುಮೇಶ್ ಆಚಾರ್ಯ, ಭೀಮಸೇನಾಚಾರ್ಯ, ಪವನಾಚಾರ್ಯ ಇದ್ದರು.ಮಂತ್ರಾಲಯ ವಿದ್ಯಾರ್ಥಿಗಳ ಸಾವು ತುಂಬಲಾರದ ನಷ್ಟ- ಶ್ರೀಗಳುಮಂತ್ರಾಲಯ ಮಠದಿಂದ ಹಂಪಿಯಲ್ಲಿ ನಡೆಯುತ್ತಿರುವ ನರಹರಿತೀರ್ಥರ ಆರಾಧನಾ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಮೂವರು ವಿದ್ಯಾರ್ಥಿಗಳು, ಚಾಲಕ ತುಫಾನ್ ಕಾರಿನ ಟೈರ್ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಇದು ಶ್ರೀಮಠಕ್ಕೆ ತುಂಬಲಾರದ ನಷ್ಟವಾಗಿದೆ. ಹಾಗಾಗಿ ವೈಭವೋಪೇತ ಆರಾಧನೆ ನೆರವೇರಿಸದೇ ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಚಿಕ್ಕಮಕ್ಕಳು ಮಠಕ್ಕೆ ಆಸ್ತಿ ಇದ್ದಂತೆ. ಅವರ ಕುಟುಂಬದ ಜೊತೆ ಶ್ರೀಮಠ ಸದಾ ಇರಲಿದೆ. ಹೋದ ಜೀವಕ್ಕೆ ಬೆಲೆ ಕಟ್ಟಲಾಗದು. ಆದರೂ ಅವರ ಕುಟುಂಬಕ್ಕೆ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ರೀತಿಯಿಂದಲೂ ಜೊತೆಗಿರುತ್ತೇವೆ ಎಂದು ಗದ್ಗದಿತರಾದರು.