ಮಹಿಳೆಯರಿಗೆ ಸ್ಥಾನಮಾನ ದೊರೆತರೆ ನಿಜವಾದ ಸಮಾನತೆ

| Published : Mar 16 2024, 01:53 AM IST

ಸಾರಾಂಶ

ನಾವು ಹೆಣ್ಣು ಗಂಡೆಂಬ ಭೇದವಿಲ್ಲದೇ ಇಬ್ಬರೂ ಒಂದೇ ಎಂದು ಅರಿತು ನಡೆಯಬೇಕು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹೆಣ್ಣು, ಗಂಡೆಂಬ ಭೇದವನ್ನು ಕಿತ್ತೆಸೆದು ಎಲ್ಲರೂ ಸಮಾನರು ಎಂಬುದನ್ನು ತೋರಿಸಿದ್ದಾರೆ

ಮುಂಡರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೇವಲ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ಬಗ್ಗೆ ಮಾತನಾಡಿದರೆ ಸಾಲದು. ಎಲ್ಲ ರಂಗದಲ್ಲಿಯೂ ಮಹಿಳೆಯರಿಗೆ ಸ್ಥಾನಮಾನ ದೊರೆತಾಗ ಮಹಿಳೆಯರಿಗೆ ನಿಜವಾದ ಸಮಾನತೆ ದೊರೆತಂತಾಗುತ್ತದೆ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ ಹೇಳಿದರು.

ಗುರುವಾರ ಸಂಜೆ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಮುಂಡರಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಕದಳಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾವು ಹೆಣ್ಣು ಗಂಡೆಂಬ ಭೇದವಿಲ್ಲದೇ ಇಬ್ಬರೂ ಒಂದೇ ಎಂದು ಅರಿತು ನಡೆಯಬೇಕು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹೆಣ್ಣು, ಗಂಡೆಂಬ ಭೇದವನ್ನು ಕಿತ್ತೆಸೆದು ಎಲ್ಲರೂ ಸಮಾನರು ಎಂಬುದನ್ನು ತೋರಿಸಿದ್ದಾರೆ. ಇಲ್ಲಿನ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಸೀತಾ ಸೋಮರಡ್ಡಿ ಬಸಾಪೂರ ಕಳೆದ ಅನೇಕ ವರ್ಷಗಳಿಂದ ಉತ್ತಮವಾದ ಸಂಘಟನೆ ಮಾಡಿಕೊಂಡು ಪ್ರತಿ ವರ್ಷವೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹಿಳೆಯೊಬ್ಬರಿಗೆ ಕದಳಿಶ್ರೀ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ವರ್ಷ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ 36 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಸಾವಿರಾರು, ಲಕ್ಷಾಂತರ ಶಿಷ್ಯಬಳಗವನ್ನು ಬೆಳೆಸಿದ ಸುನಂದಾ ಹಂಚಿನಾಳ ಅವರಿಗೆ ಪ್ರದಾನ ಮಾಡಿದ್ದು, ಅತ್ಯಂತ ಸೂಕ್ತ ಹಾಗೂ ಸಮಂಜಸವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿ ನಾಯಕ ಎಂದು ಘೋಷಿಸಿರುವುದು ಅತ್ಯಂತ ಸೂಕ್ತವಾಗಿದ್ದು, ಸರ್ಕಾರದ ಈ ಕ್ರಮವನ್ನು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸುವ ಮೂಲಕ ಸರ್ಕಾರಕ್ಕೆ ಅಭಿನಂದಿಸುವೆ ಎಂದರು.

ಕದಳಿಶ್ರೀ ಪ್ರಶಸ್ತಿ ಸ್ವೀಕರಿಸಿದ ವಿಶ್ರಾಂತ ಶಿಕ್ಷಕಿ ಸುನಂದಾ ಹಂಚಿನಾಳ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಗಾಗಿ ತಾವು ಸಲ್ಲಿಸಿದ ಅಮೋಘ ಸೇವೆಯನ್ನು ಹಾಗೂ ಸಾರ್ವಜನಿಕರೊಂದಿಗೆ ತಾವು ನಡೆದುಕೊಂಡ ರೀತಿಯನ್ನು ಗಮನಿಸಿ ಕದಳಿ ಮಹಿಳಾ ವೇದಿಕೆ ಪ್ರಸ್ತುತ ವರ್ಷದ ಕದಳಿಶ್ರೀ ಪ್ರಶಸ್ತಿ ನೀಡಿದೆ. ನಾನು ಈ ನಾಡಿನ ಮಹಿಳೆಯ ಪರವಾಗಿ ಅತ್ಯಂತ ಸಂತೋಷದಿಂದ ಸ್ವೀಕರಿಸಿ ಕದಳಿ ವೇದಿಕೆ ಅಧ್ಯಕ್ಷರಿಗೆ ಅಭಿನಂದಿಸುವೆ. ಗಂಡಿಲ್ಲದೇ ಹೆಣ್ಣು, ಹೆಣ್ಣಿಲ್ಲದೇ ಗಂಡು ಎಂದಿಗೂ ಬದುಕಲು ಸಾಧ್ಯವಿಲ್ಲ. ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಸಂಸಾರ ಸಸಾರವಾಗುತ್ತದೆ. ತಂದೆ-ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಅಂದಾಗ ಆ ಕುಟುಂಬ ಸುಖಿಯಾಗುತ್ತದೆ ಎಂದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಪ್ರೊ. ಸುಧಾ ಹುಚ್ಚಣ್ಣವರ ಮಾತನಾಡಿ, ಮುಂಡರಗಿ ತಾಲೂಕು ಕದಳಿ ಮಹಿಳಾ ವೇದಿಕೆ ತಾಲೂಕು ಮಟ್ಟದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನ ಮನ್ನಣೆ ಪಡೆದಿದೆ. ಅಲ್ಲದೇ ಪ್ರತಿ ವರ್ಷ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಕದಳಿಶ್ರೀ ಪ್ರಶಸ್ತಿ ನೀಡುತ್ತ ಬಂದಿದ್ದು, ತಾವೂ ಸಹ ಈ ಹಿಂದೆ ಈ ಪ್ರಶಸ್ತಿ ಸ್ವೀಕರಿಸಿರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಸಂಘಟನೆ ಇನ್ನೂ ಉನ್ನತವಾಗಿ ಬೆಳೆಯುವಂತಾಗಲಿ ಎಂದರು.

ವಿಶ್ರಾಂತ ಪ್ರಾ. ಎಸ್.ಬಿ.ಕೆ. ಗೌಡರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶೋಭಾ ಮೇಟಿ, ಕಲಾವಿದೆ ಜಯಶ್ರೀ ಅಳವಂಡಿ, ಯುವ ಕಲಾವಿದೆ ನಯನಾ ಅಳವಂಡಿ ಅವರನ್ನು ಸನ್ಮಾನಿಸಲಾಯಿತು. ಅನ್ಮೋಲ್ ಯೋಗ ಕೇಂದ್ರದ ಮಕ್ಕಳಿಂದ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನಗೊಂಡಿತು. ತಾಲೂಕು ಶಸಾಪ ಅಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಆಶಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಅಶೋಕ ಶಿದ್ಲಿಂಗ, ಎಸ್.ಆರ್. ಬಸಾಪೂರ, ಎಂ.ಜಿ. ಗಚ್ಚಣ್ಣವರ, ಡಾ. ನಿಂಗು ಸೊಲಗಿ, ಎಂ.ಎಲ್. ಪೊಲೀಸ್ ಪಾಟೀಲ, ಡಾ. ಪಿ.ಬಿ. ಹಿರೇಗೌಡ್ರ, ಆರ್.ಕೆ. ರಾಯನಗೌಡ್ರ, ಡಾ. ಜಗದೀಶ ಹಂಚಿನಾಳ, ಶರಣಪ್ಪ ಕುಬಸದ, ಎನ್.ಎನ್. ಕಲಕೇರಿ, ಕಾವೇರಿ ಬೋಲಾ, ಪ್ರತಿಭಾ ಹೊಸಮನಿ, ಡಾ. ಮಂಗಳಾ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೊ. ಎಸ್‌.ಆರ್. ಬಸಾಪೂರ ಸ್ವಾಗತಿಸಿದರುಯ. ಶೋಭಾ ಪಾಟೀಲ ನಿರೂಪಿಸಿದರು.