ಸಾರಾಂಶ
ಯಂತ್ರ ಕಲಿಕೆ(ಮಷಿನ್ ಲರ್ನಿಂಗ್)ಎಂಬುದು ಕೃತಕ ಬುದ್ಧಿಮತ್ತೆಯಲ್ಲಿನ ಅಧ್ಯಯನದ ಕ್ಷೇತ್ರವಾಗಿದ್ದು, ಅಂಕಿ- ಅಂಶಗಳ ಕ್ರಮಾವಳಿಗಳ ಅಭಿವೃದ್ಧಿ ಮತ್ತು ಅಧ್ಯಯನಕ್ಕೆ ಸಂಬಂಧಿಸಿದೆ.
ಕುಮಟಾ: ಜೀವನದಲ್ಲಿ ಶೈಕ್ಷಣಿಕ ಪದವಿಯ ಜತೆಗೆ ಯಾವುದಾದರೂ ಕೌಶಲ್ಯವನ್ನು ಬೆಳಸಿಕೊಂಡು ಅದರಲ್ಲಿ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುವುದು ತುಂಬಾ ಅವಶ್ಯ. ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಓದಿನ ಜತೆಗೆ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ತಂತ್ರಾಂಶಗಳ ಬಗ್ಗೆ ಹೆಚ್ಚು ತಿಳಿದುಕೊಂಡರೆ ಭವಿಷ್ಯಕ್ಕೆ ಅನುಕೂಲ ಎಂದು ಜೆನ್‌ಪ್ಯಾಕ್ಟ್ ಕಂಪನಿಯ ಉಪಾಧ್ಯಕ್ಷ ವಿನಯ ಭಟ್ಟ ತಿಳಿಸಿದರು.
ಇಲ್ಲಿನ ಕೆನರಾ ಕಾಲೇಜು ಸೊಸೈಟಿಯ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ಮತ್ತು ಯುನಿಯನ್ ಘಟಕದ ಅಡಿಯಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ವಿದ್ಯಾರ್ಥಿಗಳಿಗೆ ಇದ್ದ ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಯಂತ್ರ ಕಲಿಕೆ(ಮಷಿನ್ ಲರ್ನಿಂಗ್)ಎಂಬುದು ಕೃತಕ ಬುದ್ಧಿಮತ್ತೆಯಲ್ಲಿನ ಅಧ್ಯಯನದ ಕ್ಷೇತ್ರವಾಗಿದ್ದು, ಅಂಕಿ- ಅಂಶಗಳ ಕ್ರಮಾವಳಿಗಳ ಅಭಿವೃದ್ಧಿ ಮತ್ತು ಅಧ್ಯಯನಕ್ಕೆ ಸಂಬಂಧಿಸಿದೆ ಎಂದರು.
ಸಂಪನ್ಮೂಲ ವ್ಯಕ್ತಿ, ಐಕ್ಯುವಿಐಎ ಮಾಲೀಕ ಗಣೇಶ ಹೆಗಡೆ ಮಾತನಾಡಿ, ತಂತ್ರಾಂಶಗಳಲ್ಲಿ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವುದರೆಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕಾದದ್ದು ಇಂದಿನ ಅವಶ್ಯತೆಯಾಗಿದೆ. ದಿನದಿಂದ ದಿನಕ್ಕೆ ಉನ್ನತೀಕರಣಗೊಳ್ಳುವ ಹೊಸ ತಂತ್ರಾಂಶಗಳಲ್ಲಿ ಪರಿಣಿತಿಯನ್ನು ಪಡೆಯುವುದು ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದರು.ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷ ಡಿ.ಎಂ. ಕಾಮತ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್.ಕೆ. ನಾಯಕ ಮಾತನಾಡಿದರು. ವಿದ್ಯಾರ್ಥಿ ಯುನಿಯ್ ಪ್ರಧಾನ ಕಾರ್ಯದರ್ಶಿ ಗಣೇಶ ಭಟ್ಟ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪ್ರೊ. ವಿದ್ಯಾ ಎನ್. ತಲಗೇರಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಐಕ್ಯುಎಸಿ ಸಂಯೋಜಕ ಡಾ. ಎನ್.ಡಿ. ನಾಯಕ ವಂದಿಸಿದರು. ಶ್ರೀನಿಧಿ ಭಟ್ಟ, ರುತ್ವಿಕಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.