ಕಾಯಕದಲ್ಲಿ ದೇವರ ಸಾಕ್ಷಾತ್ಕಾರ, ಕೆಲಸದಲ್ಲಿ ದೇವರನ್ನು ಕಾಣಿ: ನಳಿನ್ ಅತುಲ್‌

| Published : Jan 25 2024, 02:00 AM IST / Updated: Jan 25 2024, 02:01 AM IST

ಕಾಯಕದಲ್ಲಿ ದೇವರ ಸಾಕ್ಷಾತ್ಕಾರ, ಕೆಲಸದಲ್ಲಿ ದೇವರನ್ನು ಕಾಣಿ: ನಳಿನ್ ಅತುಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ಸ್ವಯಂ ಉದ್ಯೋಗ ಹಾಗೂ ವೃತ್ತಿ ಕೌಶಲ್ಯದ ಜಾಗೃತಿ ಅಭಿಯಾನದ ಅಡಿಯಲ್ಲಿ ಕಾಯಕ ದೇವೋಭವ ಎನ್ನುವ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ನಳಿನ್ ಅತುಲ್ ಚಾಲನೆ ನೀಡಿದರು.

ಕೊಪ್ಪಳ: ಕಾಯಕದಲ್ಲಿ ದೇವರನ್ನು ಕಾಣಬೇಕು. ಕಾಯಕದಿಂದ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ಸ್ವಯಂಉದ್ಯೋಗ ಹಾಗೂ ವೃತ್ತಿ ಕೌಶಲ್ಯದ ಜಾಗೃತಿ ಅಭಿಯಾನದ ಅಡಿಯಲ್ಲಿ ಕಾಯಕ ದೇವೋಭವ ಎನ್ನುವ ಜಾಗೃತಿ ಜಾಥಾವನ್ನು ಸ್ವಾವಲಂಬಿ ಬದುಕು ಸಮೃದ್ಧಿ ಬದುಕು ಸಂತೋಷದ ಬದುಕು ಘೋಷವಾಕ್ಯದೊಂದಿಗೆ ಜರುಗಿದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ಗವಿಸಿದ್ದೇಶ್ವರ ಜಾತ್ರೆ ಬರೀ ಜಾತ್ರೆಯಲ್ಲ. ಇದೊಂದು ಸಾಮಾಜಿಕ ಹಾಗೂ ಜನಜಾಗೃತಿ ಜಾಥಾ ಆಗಿದೆ. ಜನರಲ್ಲಿ ಹೊಸದೊಂದು ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಈ ವರ್ಷ ಕಾಯಕ ದೇವೋ ಭವ ಘೋಷವಾಕ್ಯದೊಂದಿಗೆ ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಬೇಕು ಎಂದು ಸಂಕಲ್ಪ ಮಾಡಿರುವುದು, ಇದೊಂದು ಔದ್ಯೋಗಿಕ ಹಾಗೂ ಸ್ವಾವಲಂಬಿ ಬದುಕು ನೀಡುವ ಕಾರ್ಯಕ್ರಮ ಇದಾಗಿದೆ. ಗವಿಮಠವು ಇಂತಹ ವಿಶೇಷ ಕಾರ್ಯಕ್ರಮಗಳನ್ನು ಸುಮಾರು ೧೦ ವರ್ಷಗಳಿಂದ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಾಯಕ ದೇವೋಭವ ಎಂದರೆ ಯಾರು ಕೆಲಸ ಮಾಡುತ್ತಾರೋ ಅವರೇ ದೇವರು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು ಎಂದರು.

ಕೊಪ್ಪಳ ಗವಿಮಠದ ಶ್ರೀಗಳ ಕಾರ್ಯ ನಿಜಕ್ಕೂ ಪ್ರೇರಣೆದಾಯಕ. ಶ್ರೀಗಳು ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ಬದುಕಿಗೆ ಬೆಳಕು ನೀಡುತ್ತವೆ ಎಂದರು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ, ಶುಭ ಕೋರಿದ ಡಿಸಿ:ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ವಿದ್ಯಾರ್ಥಿನಿಯರಿಗೂ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯ ಕೋರಿದರು. ಹೆಣ್ಣು ಮಕ್ಕಳು ಸಮಾಜದ ಶಕ್ತಿ. ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು ಎಂದು ಹೇಳಿದರು.

ಜಿಪಂ ಸಿಇಒ ರಾಹುಲ್‌ರತ್ನಂ ಪಾಂಡೆ ಮಾತನಾಡಿ, ಕೆಲಸ ಮಾಡುವವರೇ ನಿಜವಾದ ದೇವರು. ಕೆಲಸದಲ್ಲಿ ಮೇಲು ಕೀಳು ಎಂಬುದಿಲ್ಲ. ಎಲ್ಲ ಕೆಲಸಗಳೂ ಶ್ರೇಷ್ಠವೇ ಎಂದು ಭಾವಿಸಬೇಕು ಮತ್ತು ಜಾಗೃತಿ ಕಾರ್ಯಗಳ ಮೂಲಕ ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಒಂಟಿಗೋಡಿ ಮಾತನಾಡಿ, ಸ್ವಾವಲಂಬಿ ಬದುಕಿನಿಂದ ನಿಜವಾದ ಸಂತೋಷ ಸಿಗುತ್ತದೆ. ಸರ್ಕಾರಿ ಕೆಲಸ ಇತ್ಯಾದಿ ಹುದ್ದೆಗಳ ಮೇಲೆ ಅವಲಂಬನೆಯಾಗದೆ ಸ್ವಾವಲಂಬಿ ಬದುಕನ್ನು ತಾವೆಲ್ಲರೂ ಕಟ್ಟಿಕೊಳ್ಳಬೇಕು. ಈ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಆಗಬೇಕು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಎಲ್ಲ ವಿದ್ಯಾರ್ಥಿನಿಯರಿಗೂ ಶುಭಾಶಯ ಕೋರಿ ಹೆಣ್ಣುಮಗಳಿಗೆ ಸಮಾನ ಅವಕಾಶ ನೀಡಿ. ಅನುಕಂಪ ಬೇಡ. ಹೆಣ್ಣು ಮಕ್ಕಳು ನೀಡಿದ ಸ್ವಾತಂತ್ರ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಗವಿಮಠದ ಶ್ರೀ ಗವಿಸಿದ್ದೇಶ್ವ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪ ನಿರ್ದೇಶಕ ಜಗದೀಶ್ ಜಿ.ಎಚ್‌., ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಬಿರಾದರ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಜಿಲ್ಲಾಧಿಕಾರಿ ಪ್ರಾಣೇಶ, ವಿವಿಧ ಇಲಾಖೆಗಳ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳು ಇದ್ದರು.