ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಅನೇಕರು ಕಾಂಗ್ರೆಸ್ ಪಕ್ಷದಲ್ಲಿ ಅನುದಾನ ಹಂಚಿಕೆಯಲ್ಲಿ ಅಸಮಾಧಾನಗೊಂಡಿದ್ದು, ಒಂದು ತಿಂಗಳಲ್ಲಿ ಅನುದಾನ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೇ ಬಂಡಾಯ ಏಳುತ್ತಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಸ್ವಪಕ್ಷೀಯ ಸರ್ಕಾರದ ವಿರುದ್ಧ ಬಂಡೇಳಲು ಕಾರಣ. ತಮ್ಮ ಕ್ಷೇತ್ರದಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ಪೂಜೆ ಮಾಡಲು ಸಾಧ್ಯವಾಗದೇ ಕಾಂಗ್ರೆಸ್ ಶಾಸಕರೇ ಧ್ವನಿ ಎತ್ತಿದ್ದು, ಹಿಂದಿನ ಸರ್ಕಾರದ ಕಾಮಗಾರಿಗಳಿಗೆ ಪೂಜೆ ಮಾಡುತ್ತಿದ್ದಾರೆ ಎಂದು ಹೇಳಿದರು.10 ಸಿಎಂ ನೆಚ್ಚಿನ ಸಂಖ್ಯೆ:
ತೈಲ ಬೆಲೆಯನ್ನು ₹೧೦ ಕಡಿಮೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಏನು ಮಾಡಿದ್ದಾರೆ? ಒಂದು ರೀತಿ ೧೦ ಎನ್ನುವುದು ಅವರ ಫೇವರಿಟ್ ಸಂಖ್ಯೆ ಇದ್ದಂತೆ ಕಾಣುತ್ತದೆ. ಈ ಹಿಂದೆ ೧೦ ಕೆಜಿ ಅಕ್ಕಿ ಎಂದು ಹೇಳಿ ಅಕ್ಕಿ ಕೊಡಲಿಲ್ಲ. ₹೧೦ ತೈಲ ಬೆಲೆ ಕಡಿಮೆ ಮಾಡುವುದಾಗಿ ಹೇಳಿ ಅದನ್ನೂ ಮಾಡಲಿಲ್ಲ ಎಂದು ಲೇವಡಿ ಮಾಡಿದ ಅವರು, ಗ್ಯಾರಂಟಿ ಯೋಜನೆ ಹೊರತುಪಡಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಜನರೇ ಗ್ಯಾರಂಟಿಗಳ ಬಗ್ಗೆ ಬೇಸರಗೊಂಡಿದ್ದಾರೆ ಎಂದು ದೂರಿದರು.ಪ್ರತಿಪಕ್ಷ ನಾಯಕ ಆರ್.ಅಶೋಕ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸುವ ಕೆಲಸ ಮಾಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಇತರೆ ನಾಯಕರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ನಾನು ಓಡಾಡಿದ್ದೇನೆ. ಲೋಕಸಭೆಯಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಇನ್ನೂ ನಾಲ್ಕೈದು ಸೀಟ್ ಗೆಲ್ಲಬಹುದಿತ್ತು ಎಂದು ವಿಶ್ಲೇಷಿಸಿದರು.
ಪರಮೇಶ್ವರಗೆ ಸಿಎಂ ಆಗುವ ಅರ್ಹತೆ ಇದೆ:ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ದುರಾಡಳಿತ ವಿರುದ್ಧ ಹೋರಾಟ ಮಾಡುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ ಎಂದ ಅವರು, ದರ್ಶನ ಹಾಗೂ ಗ್ಯಾಂಗ್‌ನಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಇದು ಒಂದು ರೀತಿ ಅಕ್ಷಮ್ಯ ಅಪರಾಧ. ಪ್ರಕರಣ ಮುಚ್ಚಿ ಹಾಕಲು ಹೋದರೆ ಸರಿಯಲ್ಲ. ಡಾ.ಜಿ. ಪರಮೇಶ್ವರ ಒಳ್ಳೆಯವರು, ಸಿ.ಎಂ. ಆಗುವ ಅರ್ಹತೆ ಇದೆ. ಆದರೆ ಅವರನ್ನು ಬಲಿ ಕೊಡುವುದಕ್ಕೆ ಗೃಹ ಸಚಿವರನ್ನಾಗಿ ಮಾಡಿದ್ದಾರೆ. ದರ್ಶನ ಪ್ರಕರಣ ಹೊಸತಲ್ಲ, ಆತ ಹಾಗೆಯೇ ಇದ್ದಾನೆ. ಹಿಂದೆಯೂ ಅನೇಕ ಪ್ರಕರಣಗಳಲ್ಲಿ ವಿವಾದ ಮಾಡಿಕೊಂಡಿದ್ದ ಎಂದು ದೂರಿದರು.
ಖರ್ಗೆ ಹಗಲುಗನಸು:ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ಕನಸು ಕಾಣುತ್ತಿದ್ದಾರೆ. ಚಂದ್ರಬಾಬು ನಾಯ್ಡು, ನಿತೀಶಕುಮಾರ ಅನೇಕ ರೀತಿಯ ಪೆಟ್ಟು ತಿಂದು ಬೆಳೆದ ನಾಯಕರು. ಚಂದ್ರಬಾಬು ನಾಯ್ಡು ಅವರ ರಾಜಕೀಯ ಜೀವನ ಅಂತ್ಯವಾಗುವ ಕಾಲಘಟ್ಟದಲ್ಲಿ ಅವರಿಗೆ ನೆರವಾಗಿದ್ದು ಬಿಜೆಪಿ. ಲಾಲೂಪ್ರಸಾದ್ ಯಾದವ ಕುಟುಂಬದ ಗೂಂಡಾಗಿರಿಯೊಂದಿಗೆ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಈಗಾಗಲೇ ನಿತೀಶಕುಮಾರ ಸ್ಪಷ್ಟಪಡಿಸಿದ್ದಾರೆ. ಶೀಘ್ರವೇ ಬಿಜೆಪಿ ೨೭೨ಕ್ಕೆ ಏರಿಕೆಯಾಗಲಿದೆ. ಆಪರೇಷನ್ ಅಲ್ಲ ಕೇವಲ ನಾರ್ಮಲ್ ಡಿಲೇವರಿ ಮೂಲಕ ಈ ಸಂಖ್ಯೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಆಗಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಸಮಾಜದ ಮತದಾರರು ವಿಜಯಪುರ ನಗರದಲ್ಲಿದ್ದಾರೆ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಹೋಗಿವೆ ಎಂದು ಹೇಳಿದರು.ವಕ್ಫ್ ಆಸ್ತಿ ವಶಕ್ಕಾಗಿ ಪಿಎಂಗೆ ಪತ್ರ:
ವಿಜಯಪುರ ಸೇರಿದಂತೆ ದೇಶದೆಲ್ಲೆಡೆ ಕೋಟಿ ಕೋಟಿ ಬೆಲೆಬಾಳುವ ಜಮೀನು ವಕ್ಫ್ ಪರಭಾರೆಯಾಗಿದೆ. ೧೨ ಲಕ್ಷ ಎಕರೆಯಷ್ಟು ಜಮೀನು ವಕ್ಫ್ ಆಸ್ತಿಯಾಗಿ ವರ್ಗಾವಣೆಯಾಗಿದೆ. ಸರ್ಕಾರ ಈ ಎಲ್ಲ ಆಸ್ತಿಯನ್ನು ಪುನಃ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಷ್ಟು ಜಮೀನಿನಲ್ಲಿ ಬಡವರಿಗೆ ಮನೆಯಾದರೂ ಕಟ್ಟಿಸಬಹುದು. ಈ ಬಗ್ಗೆ ಕೂಡಲೇ ಪ್ರಧಾನಮಂತ್ರಿಗಳಿಗೆ ಸುದೀರ್ಘವಾದ ಪತ್ರ ಬರೆಯುವೆ ಎಂದರು.ವಿಜಯಪುರದಲ್ಲಿಯೂ ವಕ್ಫ್ ಆಸ್ತಿ ಪುನಃ ಸರ್ಕಾರ ವಾಪಸ್ ಪಡೆಯಬೇಕು. ಈ ಪ್ರಕರಣಗಳಿಗೆ ಬ್ರೇಕ್ ಹಾಕದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಗೂ ಕಳಂಕ ಬರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಕೃಷಿಯೇತರ ಜಮೀನು ಪರಿವರ್ತಿಸಲು ಪ್ರತಿ ಚದರ ಅಡಿಗೆ ₹75 ಲಂಚ ನೀಡಬೇಕಾಗಿದೆ. ನಮ್ಮ ಸರ್ಕಾರದ ವಿರುದ್ಧ ಶೇ.40 ಕಮೀಷನ್ ಆರೋಪ ಮಾಡಿದವರು ಇಷ್ಟು ಇದೀಗ ಪ್ರಮಾಣದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದರು.ಮೇಲ್ಮನೆ ಶಾಸಕ ರವಿಕುಮಾರ ಸೇರಿದಂತೆ ಬಿಜೆಪಿ ಕೆಲ ಮಾಜಿ ಶಾಸಕರೊಂದಿಗೆ ಭೇಟಿ ಮಾಡಿದ್ದು, ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆಗಾಗಿ ಅಲ್ಲ. ಈ ಭೇಟಿ ಹಾಗೂ ಮಾತುಕತೆಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
ವಿಪ ಸದಸ್ಯ ರವಿಕುಮಾರ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ ನನ್ನನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಮಹತ್ವ ನೀಡಬೇಕಿಲ್ಲ. ಪಕ್ಷದ ಸಂಘಟನೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟದ ಕುರಿತು ಚರ್ಚಿಸಿದ್ದೇವೆ ಎಂದು ಸಮಜಾಯಿಸಿ ನೀಡಿದರು.-----------
ಬಾಕ್ಸ್ಜಿಗಜಿಣಗಿಗೆ ಪರ ಯತ್ನಾಳ ಬ್ಯಾಟಿಂಗ್
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೂ ಕೇಂದ್ರ ಸಚಿವ ಸ್ಥಾನ ನೀಡುವಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ. ವಿ.ಸೋಮಣ್ಣ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿಕೆ ವಿಷಯವಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂಬ ವಿಷಯವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನ ಉಪ ಚುನಾವಣೆಗಳಲ್ಲಿ ಸೋಮಣ್ಣ ಪಕ್ಷದ ಪರ ಭಾರೀ ಕೆಲಸ ಮಾಡಿದ್ದಾರೆ. ಈ ಹಿಂದೆ ಅವರನ್ನು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸಿ ಸೋಲಿಸಲಾಗಿತ್ತು. ಹಾಗಾಗಿಯೇ ಅವರ ಕೆಲಸ ನೋಡಿ ಹೈಕಮಾಂಡ್ ಎರಡು ಖಾತೆ ನೀಡಿದೆ ಎಂದರು.