ಅವಧಿಪೂರ್ವ ಜನಿಸಿದ ಮಗುವಿಗೆ ಮರುಜನ್ಮ

| Published : Aug 02 2024, 01:02 AM IST

ಸಾರಾಂಶ

ಅವಧಿಪೂರ್ವ ಜನಿಸಿದ ಮಗುವಿಗೆ ಮರುಜನ್ಮ

ಕನ್ನಡಪ್ರಭ ವಾರ್ತೆತುಮಕೂರುಪ್ರಸವ ಪೂರ್ವ ಅವಧಿಯಲ್ಲಿ ಜನಿಸಿದ ಸುಮಾರು 20 ವಾರಗಳ ನವಜಾತ ಶಿಶುವಿಗೆ ಒಂದು ತಿಂಗಳ ಕಾಲ ಆಸ್ಪತ್ರೆಯ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳ ಮೂಲಕ ತುರ್ತು ಚಿಕಿತ್ಸೆ ನೀಡಿ, ಮಗುವಿಗೆ ಪುನರ್ಜನ್ಮ ನೀಡುವಲ್ಲಿ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮಕ್ಕಳ ವೈದ್ಯರ ತಂಡ ಯಶಸ್ವಿಯಾಗಿದೆ.ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ನೊಣವಿನಕೆರೆ ಬಳಿಯ ಬೋಚಿಹಳ್ಳಿ ಗ್ರಾಮದ ಕೃಷ್ಣಮೂರ್ತಿ ಮತ್ತು ಸುಮಲತಾ ದಂಪತಿಗಳಿಗೆ ಜನಿಸಿದ ನವಜಾತ ಶಿಶುವಿಗೆ ಮರುಜನ್ಮ ದೊರತಿದೆ. ಸುಮಲತಾ ಅವರು ಏಳು ತಿಂಗಳ ಹಿಂದೆ ಗರ್ಭಿಣಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮನೆಯಲ್ಲಿ ಬೆನ್ನು ನೋವು ಕಾಣಿಸಿಕೊಂಡ ನಂತರ ಗುಬ್ಬಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ, ಅವರು ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಏಳು ತಿಂಗಳ ಗರ್ಭಿಣಿಗೆ ಒಂದು ಕೆಜಿ. ನಾಲ್ಕು ನೂರು ಗ್ರಾಂ ತೂಕದ ಶಿಶುವಿಗೆ ಹೆರಿಗೆಯಾಗಿದೆ. ಅಲ್ಲಿಂದ ಸಿದ್ಧಾರ್ಥ ಕಾಲೇಜಿನ ನವಜಾತ ಶಿಶುಗಳ ನಿಗಾ ಘಟಕಕ್ಕೆ ಪ್ರಸವ ಪೂರ್ವ ಮಗುವನ್ನು ಸೇರಿಸಲಾಯಿತು.ಸಿದ್ದಾರ್ಥ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಜಿ.ವಿ.ಕುಮಾರ್ ನೇತೃತ್ವದ ವೈದ್ಯರ ತಂಡ, ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಿ ಒಂದು ಕೆಜಿ ೮೦೦ ಗ್ರಾಂಗೆ ಶಿಶುವಿನ ತೂಕ ಹೆಚ್ಚಿಸಿ, ಆರೋಗ್ಯಕರ ಮಗುವಿನ ರೀತಿಯಲ್ಲಿರುವ ನವಜಾತ ಶಿಶುವಿಗೆ ಪುನರ್ಜನ್ಮ ನೀಡಿದ್ದಾರೆ. ನವಜಾತ ಶಿಶು ತಜ್ಞ ವೈದ್ಯ ರಸನ್ ಸುರೇಶ್ ಅವರು ಮಾತನಾಡಿ, ಆಸ್ಪತ್ರೆಗೆ ದಾಖಲಾದಾಗ ನವಜಾತ ಮಗುವಿಗೆ ಉಸಿರಾಟದ ಸಮಸ್ಯೆ ಇತ್ತು. ಮಗು ಜನಿಸಿದ ಸಮಯದಲ್ಲಿ ಒಂದು ಕೆಜಿ 400 ಗ್ರಾಮ ತೂಕವಿತ್ತು. ಇಂಥ ಸಂದರ್ಭದಲ್ಲಿ ಪೋಷಕರ ಆಶಯದ ಮೇರೆಗೆ ವೆಂಟಿಲೇಟರ್ ನಲ್ಲಿ ಸುಮಾರು ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಇದೀಗ ಮಗುವಿನ ತೂಕ ಒಂದು ಕೆಜಿ 800 ಗ್ರಾಂ ಗೆ ಹೆಚ್ಚಳವಾಗಿ ಮಗು ಬೆಳವಣಿಗೆ ಹೊಂದಿ ಆರೋಗ್ಯಕರವಾಗಿದೆ ಎಂದರು.ಜನಿಸಿದ್ದ ಮಗುವಿಗೆ ಸುಮಾರು 20 ತಿಂಗಳುಗಳಾಗಿತ್ತು. ಮಗುವಿಗೆ ಜನನಾಂಗಗಳು ಸರಿಯಾಗಿ ಬೆಳವಣಿಗೆಯಾಗಿರಲಿಲ್ಲ. ಶ್ವಾಸಕೋಶ ಜೀರ್ಣಾಂಗದ ವ್ಯವಸ್ಥೆ ಇನ್ನು ಹೊಂದಿಕೊಂಡಿರಲಿಲ್ಲ. ರೋಗನಿರೋಧಕ ಶಕ್ತಿ ಇಲ್ಲದೆ ಉಸಿರಾಟದ ತೊಂದರೆ ಎದುರಾಗಿತ್ತು. ಇದನ್ನು ಅಧ್ಯಯನ ನಡೆಸಿದ ವೈದ್ಯರ ತಂಡ, ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಲಭ್ಯವಿರುವ ನೂತನ ಟೆಕ್ನಾಲಜಿಯ ಚಿಕಿತ್ಸಾ ವಿಧಾನಗಳ ಮೂಲಕ ಮಗುವಿಗೆ ಉತ್ತಮ ಚಿಕಿತ್ಸೆ ನೀಡಿ ಬೆಳವಣಿಗೆ ಕಾರಣಕರ್ತರಾಗಿದ್ದಾರೆ. ಇದೀಗ ಮಗು ಆರೋಗ್ಯಕರವಾಗಿದೆ ತಾಯಿ ಎದೆ ಹಾಲನ್ನೇ ಮಗುವಿಗೆ ನೀಡಲಾಗುತ್ತಿದೆ. ಮಗುವಿನಿಂದ ಉತ್ತಮ ರೀತಿಯ ಸ್ಪಂದನೆ ದೊರಕಿದೆ ಎಂದು ರಸನ್ ಸುರೇಶ್ ಅವರು ಹರ್ಷ ವ್ಯಕ್ತ ಪಡಿಸಿದರು.