ಪ್ರಚಾರಕ್ಕೆ ಬರುವವರಿಗೆ ಛೀಮಾರಿ ಹಾಕಿ ಪಾಠ ಕಲಿಸಿ-ಶಾಂತಕುಮಾರ

| Published : Mar 30 2024, 12:46 AM IST

ಸಾರಾಂಶ

ಯಾವ ಪಕ್ಷದ ಅಭ್ಯರ್ಥಿಯೂ ಬೇಡ ಎಂದಾದರೆ ನೋಟಾಕ್ಕೆ ಮತ ಹಾಕುವ ಅವಕಾಶವಿದೆ. ಆದರೆ, ಈ ಲೆಕ್ಕಕ್ಕೆ ಬಾರದ ನೋಟಾ ರದ್ದುಗೊಳಿಸಬೇಕು. ನೋಟಾಕ್ಕೆ ಮತ ಹಾಕಿದರೂ ಒಂದೇ, ಬಿಟ್ಟರೂ ಒಂದೇ. ಆದ್ದರಿಂದ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕುರಬೂರು ಶಾಂತಕುಮಾರ ತಿಳಿಸಿದರು.

ಹಾವೇರಿ: ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸದ ರಾಜಕೀಯ ಪಕ್ಷಗಳ ಮುಖಂಡರು ಹಳ್ಳಿಗಳಿಗೆ ಪ್ರಚಾರಕ್ಕೆ ಬಂದಾಗ ರೈತರು ಛೀಮಾರಿ ಹಾಕಿ ತಕ್ಕಪಾಠ ಕಲಿಸಬೇಕು ಎಂದು ರಾಜ್ಯ ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಕರೆ ನೀಡಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು, ದನಕರುಗಳಿಗೆ ಮೇವು, ಕೃಷಿ ಪಂಪ್‌ಸೆಟ್, ವಿದ್ಯುತ್ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ರೈತ ಮತ್ತು ಕೃಷಿ ವಲಯ ಸಿಲುಕಿ ನರಳುತ್ತಿದೆ. ರಾಜ್ಯದಲ್ಲಿ ಬರಗಾಲದ ಕಾರಣ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ರಾಜ್ಯದಲ್ಲಿರುವ ೪೦ ಲಕ್ಷ ಕೃಷಿ ಪಂಪ್‌ಸೆಟ್ ಪೈಕಿ ೧೦ ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿದೆ. ಹಳ್ಳಿಗಳ ಕೆರೆಕಟ್ಟೆಗಳು, ಬೆಟ್ಟಗುಡ್ಡಗಳು ಬತ್ತಿ ಹೋಗಿದೆ. ಪರಿಸರ ನಾಶವಾಗುತ್ತಿರುವ ಕಾರಣ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಹಳ್ಳಿ, ಪಟ್ಟಣಗಳಲ್ಲಿ ಗುಡಿ, ಮಂದಿರ-ಮಸೀದಿ, ಸಮುದಾಯ ಭವನಗಳ ನಿರ್ಮಾಣದ ಬದಲು, ಮುಂದಿನ ತಲೆಮಾರಿಗೆ ಕೃಷಿ ಉಳಿಸಲು ಕೆರೆ ಕಟ್ಟೆಗಳನ್ನು ಪುನರುಜ್ಜೀವನಗೊಳಿಸಿ ಸಂರಕ್ಷಿಸಲು ರೈತರು ಸಾರ್ವಜನಿಕರು ಮುಂದಾಗಬೇಕು. ಪರಿಸರ ನಾಶದಿಂದ ಬರಗಾಲದ ಸಂಕಷ್ಟ ಹೆಚ್ಚುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.ರಾಜ್ಯಾದ್ಯಂತ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ, ಕೆಟ್ಟು ಹೋದ ಟಿಸಿಗಳ ಜೋಡಣೆ ವಿಳಂಬವಾಗುತ್ತಿದೆ. ಅಧಿಕಾರಿಗಳು ಚುನಾವಣೆಯ ಗುಂಗಿನಲ್ಲಿ ತೇಲಾಡುತ್ತಿದ್ದಾರೆ, ಹತಾಶೆಗೊಂಡ ರೈತ ವಲಸೆ ಹೋಗುತ್ತಿದ್ದಾನೆ. ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣ ಪಾವತಿಸುತ್ತಿಲ್ಲ. ೮೦ ಕಾರ್ಖಾನೆಗಳು ೫.೮೦ಕೋಟಿ ಕಬ್ಬು ನುರಿಸಿದ್ದು ಇನ್ನು ಹಲವಾರು ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣ ಪಾವತಿ ಬಾಕಿ ಉಳಿಸಿಕೊಂಡಿವೆ. ಬರಗಾಲದ ಬವಣೆಯಲ್ಲಿರುವ ರೈತರ ಸಾಲ ವಸೂಲಿ ಮಾಡಬಾರದು ಎಂದು ಎಲ್ಲಾ ಬ್ಯಾಂಕು ಸಹಕಾರ ಸಂಘಗಳಿಗೆ ಸರ್ಕಾರದ ಆದೇಶ ಇದ್ದರೂ ಬ್ಯಾಂಕುಗಳು ನಿರ್ಲಕ್ಷಿಸಿ, ರೈತರನ್ನ ಸುಲಿಗೆ ಮಾಡುತ್ತಿವೆ. ಅದರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.ಬಳ್ಳಾರಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಲಾಗಿದೆ. ದೆಹಲಿಯ ಗಡಿಯಲ್ಲಿ ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರ ಮೇಲೆ ಗೋಲಿಬಾರ್ ಮಾಡಿ ಶುಭಕರಣ್ ಸಿಂಗ್ ಎನ್ನುವ ರೈತನನ್ನು ಕೊಲೆ ಮಾಡಿದೆ. ಚುನಾವಣೆಯಲ್ಲಿ ಮತ ನೀಡಲು ಮಾತ್ರ ರೈತರು ಬೇಕಾಗಿದ್ದಾರೆ. ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಹಂಗಿನಲ್ಲಿ ಸಾಗಬಾರದು. ಬಂಡವಾಳ ಶಾಹಿಗಳ ಕುತಂತ್ರದ ನಡೆಗಳಿಂದ ರೈತರ ಸಮಸ್ಯೆಗಳು ಹೆಚ್ಚುತ್ತಿವೆ. ಹಳ್ಳಿ ಹಳ್ಳಿಗಳಲ್ಲಿ ರೈತರು ಜಾತಿ ಪಕ್ಷವನ್ನ ಬದಿಗೊತ್ತಿ ಸಂಘಟಿತರಾಗಿ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟಕ್ಕೆ ನಿಲ್ಲುವಂತಾಗಬೇಕು. ರೈತರ ಹೆಸರಿನಲ್ಲಿ ಹುಟ್ಟುವ ರೈತ ಸಂಘಗಳು ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಂಘಟನೆಗಳಾಗಬೇಕೇ ಹೊರತು ಯಾವುದೇ ರಾಜಕೀಯ ಪಕ್ಷದ ಹಂಗಿನಲ್ಲಿ ಸಾಗಬಾರದು ಎಂದು ಮನವಿ ಮಾಡಿದರು.ಜಿಲ್ಲೆಯಲ್ಲಿ ಬಿಳಿ ಜೋಳ ಹಾಗೂ ಹೈಬ್ರಿಡ್ ಜೋಳದ ಬೆಲೆ ಕುಸಿತವಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಯಾವ ಪಕ್ಷದ ಅಭ್ಯರ್ಥಿಯೂ ಬೇಡ ಎಂದಾದರೆ ನೋಟಾಕ್ಕೆ ಮತ ಹಾಕುವ ಅವಕಾಶವಿದೆ. ಆದರೆ, ಈ ಲೆಕ್ಕಕ್ಕೆ ಬಾರದ ನೋಟಾ ರದ್ದುಗೊಳಿಸಬೇಕು. ನೋಟಾಕ್ಕೆ ಮತ ಹಾಕಿದರೂ ಒಂದೇ, ಬಿಟ್ಟರೂ ಒಂದೇ. ಆದ್ದರಿಂದ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕುರಬೂರು ಶಾಂತಕುಮಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಬಸಲಿಂಗಪ್ಪ ನರಗುಂದ, ರಾಜಶೇಖರ್ ಅಲಸೂರ, ಬಸಲಿಂಗಪ್ಪ ಮಲ್ಲೂರ, ಅತ್ತಹಳ್ಳಿ ದೇವರಾಜ್, ಮಾಂತೇಶ್ ಕೋರಿ, ದೇವಣ್ಣ ಅಳವಳ್ಳಿ, ಚನ್ನಕುಮಾರ್ ದೇಸಾಯಿ, ಬರಡನಪುರ ನಾಗರಾಜ್ ಇದ್ದರು.